Justice S Ravindra Bhat and Justice Aravind Kumar
Justice S Ravindra Bhat and Justice Aravind Kumar 
ಸುದ್ದಿಗಳು

ಬಾಲ ನ್ಯಾಯ ಕಾಯಿದೆಯಡಿ ವಯಸ್ಸಿನ ನಿರ್ಣಯಕ್ಕೆ ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು ಅವಲಂಬಿಸಲಾಗದು: ಸುಪ್ರೀಂ ಕೋರ್ಟ್

Bar & Bench

ಬಾಲ ನ್ಯಾಯ ಕಾಯಿದೆ (ಜೆಜೆ ಕಾಯಿದೆ) ಅಡಿಯಲ್ಲಿ ವ್ಯಕ್ತಿಯ ವಯಸ್ಸನ್ನು ನಿರ್ಧರಿಸಲು ಶಾಲಾ ವರ್ಗಾವಣೆ ಪ್ರಮಾಣಪತ್ರವು ಆಧಾರವಾಗಲಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಪಿ ಯುವಪ್ರಕಾಶ್  ಮತ್ತು ಸರ್ಕಾರವನ್ನು ಪ್ರತಿನಿಧಿಸಿರುವ ಪೊಲೀಸ್ ಇನ್ಸ್‌ಪೆಕ್ಟರ್ ನಡುವಣ ಪ್ರಕರಣ].

ಅಪ್ರಾಪ್ತರ ವಯಸ್ಸನ್ನು ನಿರ್ಧರಿಸಲು ವರ್ಗಾವಣೆ ಪ್ರಮಾಣಪತ್ರದ ಮೇಲೆ ಅವಲಂಬಿತರಾಗಲು ಕೆಳ ನ್ಯಾಯಾಲಯಗಳಿಗೆ ಅವಕಾಶ ನೀಡುವುದು ಅವಾಸ್ತವ ಮತ್ತು ಪ್ರಮಾದಕರವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ಅರವಿಂದ್‌ ಕುಮಾರ್‌ ಅವರಿದ್ದ ಪೀಠ ತಿಳಿಸಿದೆ.

ಬಾಲ ನ್ಯಾಯ ಕಾಯಿದೆಯ ಸೆಕ್ಷನ್ 94ರ ಪ್ರಕಾರ, ವ್ಯಕ್ತಿಯ ವಯಸ್ಸಿಗೆ ಸಂಬಂಧಿಸಿದ ವಿವಾದ ಆಕೆ ಅಥವಾ ಅವನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಡಿ (ಪೋಕ್ಸೊ ಕಾಯಿದೆ) ಸಂತ್ರಸ್ತನಾಗಿರುವ ಸಂದರ್ಭದಲ್ಲಿ ಉದ್ಭವಿಸುತ್ತದೆ. ಆಗ ಶಾಲೆಗಳು ನೀಡುವ ಜನ್ಮ ಪ್ರಮಾಣ ಪತ್ರ ಅಥವಾ ಪರೀಕ್ಷಾ ಮಂಡಳಿಯ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪ್ರಮಾಣಪತ್ರ;, ಇವುಗಳು ಇಲ್ಲದಿದ್ದಲ್ಲಿ ಪುರಸಭೆ ಅಥವಾ ಪಂಚಾಯ್ತಿಗಳು ನೀಡುವ ಜನನ ಪ್ರಮಾಣ ಪತ್ರ; ಇವು ಕೂಡ ಸಿಗದಿದ್ದ ವೇಳೆ ವಯಸ್ಸನ್ನುಅಳೆಯುವ ಪರೀಕ್ಷೆ ಅಥವಾ ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಪರೀಕ್ಷೆ ಮೂಲಕ ನಿರ್ಣಯಿಸಲಾಗುತ್ತದೆ ಎಂದು ಅದು ನುಡಿದಿದೆ.

ಹೀಗಾಗಿ ವಯಸ್ಸನ್ನು ನಿರ್ಣಯಿಸಲು ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು ಅವಲಂಬಿಸಿದ ಮದ್ರಾಸ್‌ ಹೈಕೋರ್ಟ್‌ ಘಟನೆಯ ಸಮಯದಲ್ಲಿ ಅಪ್ರಾಪ್ತ ವಯಸ್ಕನಿಗೆ 19 ವರ್ಷ ವಯಸ್ಸಾಗಿತ್ತು ಎಂಬ ವೈದ್ಯರ ಅಭಿಪ್ರಾಯವನ್ನು ತಿರಸ್ಕರಿಸಿ ಎಡವಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.  

ಆದ್ದರಿಂದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಾಲ್ಯ ವಿವಾಹಕ್ಕೆ ಒತ್ತಾಯಿಸಿದ್ದ ಆರೋಪದ ಮೇಲೆ ವ್ಯಕ್ತಿಗೆ (ಪ್ರಕರಣದ ಮೇಲ್ಮನವಿದಾರ) ಮದ್ರಾಸ್‌ ಹೈಕೋರ್ಟ್‌ ವಿಧಿಸಿದ್ದ ಶಿಕ್ಷೆಯನ್ನು ಅದು ರದ್ದುಗೊಳಿಸಿತು. ಜೊತೆಗೆ ಮೇಲ್ಮನವಿದಾರನನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿತು.