School Fees, Supreme Court
School Fees, Supreme Court  
ಸುದ್ದಿಗಳು

ಪೋಷಕರಿಂದ ಶುಲ್ಕ ವಸೂಲಾತಿ ಸಂಬಂಧ ಶಾಲೆಗಳು ಕ್ರಮ ಕೈಗೊಳ್ಳಬಹುದು: ಸುಪ್ರೀಂಕೋರ್ಟ್

Bar & Bench

ನಿಗದಿತ ಸಮಯದಲ್ಲಿ ಪೋಷಕರಿಂದ ಪಾವತಿ ಆಗದ ಶುಲ್ಕ ವಸೂಲಿ ಸಂಬಂಧ ಕ್ರಮ ಕೈಗೊಳ್ಳಲು ಶಾಲಾ ಆಡಳಿತಗಳು ಮುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ. (ಪ್ರೋಗ್ರೆಸೀವ್‌ ಸ್ಕೂಲ್ಸ್‌ ಅಸೋಸಿಯೇಷನ್‌ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ).

ಮೇ 20ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ ಕಂತು ಪಾವತಿಯ ಗಡುವು ಬಹಳ ಹಿಂದೆಯೇ ಮುಗಿದಿದ್ದರೂ ಪೋಷಕರು/ ಪಾಲಕರು ಇನ್ನೂ ಹಣ ಪಾವತಿಸಿಲ್ಲ ಹಾಗೂ ಮರುಪಾವತಿಗೆ ವಿಫಲರಾಗಿದ್ದಾರೆ ಎಂದು ಶಾಲೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಅಕ್ಟೋಬರ್ 1ರಂದು ಈ ಆದೇಶ ನೀಡಿದೆ.

“ಇನ್ನೂ ಪಾವತಿಯಾಗದ ಬಾಕಿ ಹಣ/ ಮೊತ್ತ ವಸೂಲು ಮಾಡಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮುಕ್ತವಾಗಿವೆ. ಇದೇ ವೇಳೆ ಸಂಬಂಧಪಟ್ಟ ಪೋಷಕರು/ ಪಾಲಕರು ನಿಜವಾಗಿಯೂ ವಿನಾಯಿತಿ ಬಯಸಿದರೆ ಅಂತಹ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಲು ಶಾಲಾಡಳಿತ ಮುಕ್ತವಾಗಿದೆ. ಇದರ ಹೊರತಾಗಿ ಹೆಚ್ಚೇನನ್ನೂ ಹೇಳಬೇಕಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಖಾಸಗಿ ಅನುದಾನ ರಹಿತ ಶಾಲೆಗಳ ಸ್ವಾಯತ್ತತೆಗೆ ಧಕ್ಕೆ ತರುವ ರೀತಿಯಲ್ಲಿ ಪೋಷಕರಿಂದ ಕನಿಷ್ಠ ಮತ್ತು ಅನುಮತಿಸಬಹುದಾದ ಶುಲ್ಕ ನಿಗದಿಪಡಿಸಲು ಮತ್ತು ಸಂಗ್ರಹಿಸಲು ರಾಜ್ಯ ಸರ್ಕಾರಗಳು ಕೋವಿಡ್‌ ಸಾಂಕ್ರಾಮಿಕ ಉಲ್ಲೇಖಿಸುವಂತಿಲ್ಲ ಎಂದು ಮೇ 3ರಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಮಾರ್ಚ್ 2020ರಿಂದ ಕೋವಿಡ್‌ ಪ್ರೇರಿತ ಲಾಕ್‌ಡೌನ್‌ ಮಾಡಿದ ಬಳಿಕ ಶಾಲಾಶುಲ್ಕ ವಸೂಲಾತಿ ಮುಂದೂಡಲು/ಕಡಿಮೆ ಮಾಡಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಗಳ ವಿರುದ್ಧ ರಾಜಸ್ಥಾನದ ಖಾಸಗಿ ಅನುದಾನ ರಹಿತ ಶಾಲೆಗಳು ಸಲ್ಲಿಸಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಮೇ 3ರ ತೀರ್ಪು ಹೊರಬಿದ್ದಿತ್ತು. ಶುಲ್ಕ, ಬಾಕಿ ಹಣ / ಪಾವತಿಸದೇ ಉಳಿದ ಶುಲ್ಕಗಳ ಕಾರಣಕ್ಕಾಗಿ ಆನ್‌ಲೈನ್‌ ಅಥವಾ ನೇರ ತರಗತಿಗೆ ಹಾಜರಾಗದಂತೆ ಯಾವುದೇ ವಿದ್ಯಾರ್ಥಿಗೆ ನಿರ್ಬಂಧ ಹೇರುವಂತಿಲ್ಲ ಮತ್ತು ಇದೇ ಕಾರಣಕ್ಕೆ ಪರೀಕ್ಷಾ ಫಲಿತಾಂಶಗಳನ್ನು ತಡೆಹಿಡಿಯುವಂತಿಲ್ಲ ಎಂದು ತೀರ್ಪಿನಲ್ಲಿ ವಿವರಿಸಲಾಗಿತ್ತು.

ಕಂತಿನ ಮೂಲಕ ಹಣ ಪಾವತಿಸುವ ಗಡುವು ಮುಕ್ತಾಯಗೊಂಡರೂ ಶುಲ್ಕ ಪಾವತಿಸದ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್‌ ಇದೀಗ ಸ್ಪಷ್ಟಪಡಿಸಿದೆ. ಮೇ 3ರ ತೀರ್ಪಿನ ಪ್ರಕಾರವೇ ಕಾನೂನಿಗೆ ಅನುಸಾರವಾಗಿ ಕಟ್ಟುನಿಟ್ಟಿನಿಂದ ವಸೂಲಾತಿ ಪ್ರಕ್ರಿಯೆ ನಡೆಯಬೇಕು ಎಂದು ಅಕ್ಟೋಬರ್ 1ರ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಹಿರಿಯ ವಕೀಲರಾದ ವಿಕಾಸ್ ಸಿಂಗ್, ವಕೀಲರಾದ ಅಜೀಮ್ ಸ್ಯಾಮ್ಯುಯೆಲ್, ಡೈಸಿ ಹನ್ನಾ ಮತ್ತು ವಿವೇಕ್ ಪಾಲ್ ಒರಿಯಲ್ ಅರ್ಜಿದಾರ ಶಾಲೆಗಳ ಪರ ಹಾಜರಾದರು. ಹಿರಿಯ ವಕೀಲ ಮನೀಶ್ ಸಿಂಘ್ವಿ ರಾಜಸ್ಥಾನ ಸರ್ಕಾರವನ್ನು ಪ್ರತಿನಿಧಿಸಿದರು.