Liquor Alcohol
Liquor Alcohol 
ಸುದ್ದಿಗಳು

ಮಕ್ಕಳಲ್ಲಿ ಸೂಕ್ತ ಮೌಲ್ಯ ಬಿತ್ತುವ ಶಾಲೆಗಳು ಸಮೀಪದ ಮದ್ಯದಂಗಡಿಗಳ ಬಗ್ಗೆ ಚಿಂತಿಸಬೇಕಿಲ್ಲ: ಬಾಂಬೆ ಹೈಕೋರ್ಟ್

Bar & Bench

ರಾಷ್ಟ್ರಪಿತ ಮಹಾತ್ಮಗಾಂಧಿಯವರು ಅಂದುಕೊಂಡಂತೆ ಶಾಲೆಗಳು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಕಲಿಸಿದರೆ ಸಮೀಪದ ಮದ್ಯದಂಗಡಿಗಳು ತಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಚಿಂತಿಸಬೇಕಿಲ್ಲ ಎಂಬುದಾಗಿ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. (ದೇವರಾಂ ಎಸ್‌ ಮುಂಡೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ).

ಆ ಮೂಲಕ ಶಾಲೆಯೊಂದರ ಸಮೀಪದ ರೆಸ್ಟೋರೆಂಟ್‌ಗೆ ನೀಡಲಾದ ಮದ್ಯದ ಪರವಾನಗಿ ಸಂಬಂಧ ಸಲ್ಲಿಸಿದ ಅರ್ಜಿಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾ. ಜಿ ಎಸ್‌ ಕುಲಕರ್ಣಿ ನೇತೃತ್ವದ ಏಕಸದಸ್ಯ ಪೀಠ ನಿರಾಕರಿಸಿತು.

"ಸಮೀಪದ ಮದ್ಯ ಪೂರೈಸುವ ರೆಸ್ಟೋರೆಂಟ್‌ನಿಂದ ವಿದ್ಯಾರ್ಥಿಗಳು ಸುಲಭವಾಗಿ ಪ್ರಭಾವಿತರಾಗುತ್ತಾರೆ ಎಂಬಷ್ಟು ದುರ್ಬಲವಾದ" ಅಭಿಪ್ರಾಯ ರೂಪಿಸುವಂತೆ ಅರ್ಜಿದಾರರು ಶಿಕ್ಷಣ ನೀಡುತ್ತಿರುವ ಸಂಸ್ಥೆ ಇರಬಾರದು ಎಂದು ನ್ಯಾಯಾಲಯ ಹೇಳಿತು.

ರಾಷ್ಟ್ರಪಿತ ನಮ್ಮ ಜನರಲ್ಲಿ ಬಿತ್ತಲು ಉದ್ದೇಶಿಸಿದಂತೆ ಮಕ್ಕಳ ಕಲಿಕೆ ಮತ್ತು ನೈತಿಕ ಮೌಲ್ಯಗಳ ಅಳವಡಿಕೆ ಇದ್ದರೆ ಶಾಲೆಯ ಸಮೀಪದ ಯಾವುದೇ ಮದ್ಯದಂಗಡಿ ವಿದ್ಯಾರ್ಥಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಚಿಂತಿಸುವ ಅಗತ್ಯ ಬೀಳುವುದಿಲ್ಲ ಎಂಬುದಾಗಿ ಪೀಠ ತಿಳಿಸಿತು.

ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಅರ್ಜಿದಾರರು ನಡೆಸುತ್ತಿರುವ ಶಾಲೆಯ ಸಮೀಪದ ರೆಸ್ಟೋರೆಂಟ್‌ಗೆ ನೀಡಲಾದ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಅಬಕಾರಿ ಇಲಾಖೆಯ ಆದೇಶ ಪ್ರಶ್ನಿಸಿ ದೇವರಾಂ ಎಸ್‌ ಮುಂಡೆ ಮತ್ತು ಇಬ್ಬರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಶಾಲಾ ಸಂಸ್ಥೆಯಿಂದ 375 ಮೀಟರ್ ದೂರದಲ್ಲಿರುವ ಹೋಟೆಲ್‌ ಆನಂದ್‌ ಹೆಸರಿನ ಮತ್ತೊಂದು ರೆಸ್ಟೋರೆಂಟ್‌ ಕೂಡ ಇದೇ ರೀತಿಯ ಪರವಾನಗಿ ಹೊಂದಿದ್ದು ಇದಕ್ಕೆ ಶಾಲೆಯಿಂದ ಇದುವರೆಗೆ ಆಕ್ಷೇಪ ವ್ಯಕ್ತವಾಗಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು. ಅಲ್ಲದೆ ಆಯುಕ್ತರು ತಿಳಿಸಿದಂತೆ ಇಲ್ಲಿಯವರಗೆ ಕಾನೂನು ಸುವ್ಯವಸ್ಥೆಯ ಪ್ರಶ್ನೆ ಉದ್ಭವಿಸಿಲ್ಲ ಎಂಬ ಅಂಶವನ್ನೂ ಪೀಠ ಪರಿಗಣನೆಗೆ ತೆಗೆದುಕೊಂಡಿತು.

ಜೀವನದಲ್ಲಿ ಕಠಿಣ ಸವಾಲು ಎದುರಿಸುವಂತಹ ಮತ್ತು ಆದರ್ಶ ನಾಗರಿಕರನ್ನು ರೂಪಿಸುವಂತಹ ನೈತಿಕ ಮೌಲ್ಯದೊಂದಿಗೆ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ನ್ಯಾ. ಕುಲಕರ್ಣಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಆದೇಶದ ಪ್ರತಿ ಇಲ್ಲಿ ಓದಿ:

Devram_Sawleram_Mundhe_v_State_of_Maharashtra.pdf
Preview