ಶಾಸಕರು ಪಕ್ಷಾಂತರ ಮಾಡುವುದನ್ನು ತಡೆಯಲು ವಿಧಾನಸಭೆಯ ಸ್ಪೀಕರ್‌ಗೆ ಸಂವಿಧಾನದ 10ನೇ ಷೆಡ್ಯೂಲ್ ಅಡಿ ಪಕ್ಷಾಂತರ ಮಾಡುವವರನ್ನು ಅನರ್ಹಗೊಳಿಸಲು ಕಲ್ಪಿಸಲಾಗಿರುವ ಹಾಲಿ ವ್ಯವಸ್ಥೆಯನ್ನು ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಈಚೆಗೆ ಟೀಕಿಸಿದ್ದಾರೆ.
ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯು “ಡೀಕೋಡಿಂಗ್ ಡಿಫೆಕ್ಷನ್” ವಿಷಯದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷಾಂತರಿಗಳನ್ನು ಅನರ್ಹಗೊಳಿಸುವ ವಿಚಾರದಲ್ಲಿ ಸ್ಪೀಕರ್ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಾರೆ ಎಂಬುದು ಅಪ್ರಾಯೋಗಿಕ ಎಂದು ನಿರ್ಭಿಡೆಯಿಂದ ಸಿಂಘ್ವಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ 10ನೇ ಷೆಡ್ಯೂಲ್ ಅಡಿ ಜಾರಿಯಲ್ಲಿರುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಹಲವು ಪ್ರಕರಣಗಳಲ್ಲಿ ಆರು ತಿಂಗಳಾದರೂ ಸ್ಪೀಕರ್ ಅವರಿಂದ ಪಕ್ಷಾಂತರ ಅನರ್ಹ ವಿಚಾರ ನಿರ್ಧಾರವಾಗುವುದಿಲ್ಲ ಎಂದಿದ್ದಾರೆ.
“ಇಡೀ ವ್ಯವಸ್ಥೆ ದೋಷಪೂರಿತವಾಗಿದ್ದು, 10ನೇ ಷೆಡ್ಯೂಲ್ ಅನ್ನು ರದ್ದುಪಡಿಸಬೇಕು. (ಅನರ್ಹತೆ ನಿರ್ಧರಿಸುವ ಅರ್ಜಿಗಳ) ವಿಚಾರಣೆ ಸಾಮಾನ್ಯವಾಗಿದೆ. ಒಂದೇ ಪಕ್ಷದ ಸ್ಪೀಕರ್ ಅನರ್ಹತೆ ಅರ್ಜಿಗಳನ್ನು ನಿರ್ಧರಿಸಿದರೆ ವಸ್ತುನಿಷ್ಠತೆ ನಿರ್ಧರಿಸುವುದು ಹೇಗೆ?... 10ನೇ ಷೆಡ್ಯೂಲ್ ರದ್ದುಪಡಿಸಲು ಇದು ಸಕಾಲ. ನಿರ್ದಿಷ್ಟ ಪಕ್ಷದ ಟಿಕೆಟ್‌ನಿಂದ ಚುನಾಯಿತವಾದ ವ್ಯಕ್ತಿಯನ್ನು ಸುದ್ಗಣದ ಮೂರ್ತಿಯಾಗಿ ನಿರೀಕ್ಷಿಸಲಾಗದು. ಇದೊಂದು ಆದರ್ಶ ಭರವಸೆಯಾಗಿದ್ದು, ಅನುಷ್ಠಾನಗೊಳಿಸಲಾಗದು. ಸ್ಪೀಕರ್ ತಟಸ್ಥವಾಗಿರಬೇಕೆಂದು ನಿರೀಕ್ಷಿಸುವುದು ಸಂಪೂರ್ಣ ಹಾಸ್ಯಾಸ್ಪದ!” ಎಂದಿದ್ದಾರೆ.
ವಸ್ತುನಿಷ್ಠತೆ ಖಾತರಿಪಡಿಸಿಕೊಳ್ಳಲು ಸ್ಪೀಕರ್ ಆಗಿ ಯಾರನ್ನು ನೇಮಿಸಬೇಕು ಎಂಬ ಪ್ರಶ್ನೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಮೊದಲೇ ನಿರ್ಧರಿಸಬಹುದು ಎಂದು ಸಿಂಘ್ವಿ ಸಲಹೆ ನೀಡಿದರು. ಆದಾಗ್ಯೂ, ರಾಜಕೀಯ ಪಕ್ಷಗಳ ನಡುವೆ ಅಂತಹ ಒಮ್ಮತವನ್ನು ಎಂದಿಗೂ ಸಾಧಿಸಲಾಗದು ಎಂದೂ ಹೇಳಿದರು.
“ನೈತಿಕತೆಯನ್ನು ಶಾಸನಬದ್ಧಗೊಳಿಸಲಾಗದು. ಈ ವ್ಯವಸ್ಥೆಯನ್ನು ನಾವು ಇಂಗ್ಲೆಂಡ್‌ನಿಂದ ಎರವಲು ಪಡೆದಿದ್ದು, ಅಲ್ಲಿ ಎಷ್ಟು ಪಕ್ಷಾಂತರವಾಗುತ್ತವೆ? ಪಕ್ಷಾಂತರಿಗಳಿಗೆ ಅಲ್ಲಿ (ಇಂಗ್ಲೆಂಡ್‌ನಲ್ಲಿ) ಮತ ಹಾಕುವುದಿಲ್ಲ. ಇಲ್ಲಿ ನಮ್ಮ-ನಿಮ್ಮ ತಪ್ಪಿನಿಂದಾಗಿ ಪಕ್ಷಾಂತರಿಗಳನ್ನು ಚುನಾಯಿಸುತ್ತೇವೆ. ಕಾಗದದಲ್ಲಿ ಉಲ್ಲೇಖಿಸಿರುವಂತೆ ನಿಜವಾಗಿಯೂ 10ನೇ ಷೆಡ್ಯೂಲ್ ಮತ್ತು ಸ್ಪೀಕರ್ ಅಗತ್ಯವಿಲ್ಲ. ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಪಕ್ಷಾಂತರ ಇಲ್ಲವೇ ಇಲ್ಲ. ಏಕೆಂದರೆ ಮತದಾರರು ಅವರಿಗೆ ಸರಿಯಾಗಿ ಶಿಕ್ಷೆ ನೀಡುತ್ತಾರೆ!” ಎಂದರು.