Justice M Nagaprasanna and Karnataka HC's Dharwad Bench
Justice M Nagaprasanna and Karnataka HC's Dharwad Bench 
ಸುದ್ದಿಗಳು

[ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ] ನಕಲಿ ಪ್ರಕರಣಗಳ ಹಾವಳಿಯಿಂದ ನೈಜ ಪ್ರಕರಣಗಳಿಗೆ ಹಾನಿ: ಹೈಕೋರ್ಟ್‌

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ನಕಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು ಇದರಿಂದಾಗಿ ನೈಜ ಪ್ರಕರಣಗಳಿಗೆ ತೊಂದರೆಯಾಗುತ್ತಿದೆ ಎಂದು ಬೇಸರಿಸಿದೆ.

ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾಯಾಲಯವು, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ಪ್ರಕರಣ ದಾಖಲಿಸಿರುವ ವ್ಯಕ್ತಿಯು ಇಂಥ ಕೃತ್ಯದಲ್ಲಿ ಭಾಗಿಯಾಗುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಇಂಥ ನಕಲಿ ಪ್ರಕರಣಗಳಿಂದಾಗಿ ನೈಜ ಪ್ರಕರಣಗಳಿಗೆ ತೊಂದರೆ ಉಂಟಾಗುತ್ತಿವೆ” ಎಂದಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ದೂರುದಾರನಿಂದ 1.5 ಲಕ್ಷ ರೂಪಾಯಿ ವಾಪಸ್‌ ಪಡೆಯುವಂತೆ ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶಿಸಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಮುಗನೂರಿನ ಶ್ರೀ ಮರಡಿ ಮಲ್ಲೇಶ್ವರ ಶಾಲೆಯ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಕೆರಕಲಮಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ನಕಲಿ ಪ್ರಕರಣಗಳ ರಾಶಿಯು ಹೆಚ್ಚಾಗಿದ್ದು, ನೈಜ ಪ್ರಕರಣಗಳನ್ನು ರಾಶಿಯಲ್ಲಿ ಹುಡುಕುವುದು ಸೂಜಿ ಹುಡುಕಿದಂತಾಗಿದೆ. ಬಹುತೇಕ ಪ್ರಕರಣಗಳು ಹಾಲಿ ಪ್ರಕರಣದಂತೆ ಕಾನೂನಿನ ದುರ್ಬಳಕೆಯಾಗಿವೆ” ಎಂದು ನ್ಯಾಯಾಲಯ ಹೇಳಿದೆ.

“ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸುವ ಅಧಿಕಾರಿಯು ಅದಕ್ಕೂ ಮುನ್ನ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಹಾಲಿ ಪ್ರಕರಣವು ಅಧಿಕಾರಿಗಳಿಗೆ ಕಣ್ತೆರೆಸುವ ಪ್ರಕರಣವಾಗಬೇಕು” ಎಂದು ನ್ಯಾಯಾಲಯ ಹೇಳಿದೆ.

ಈ ನೆಲೆಯಲ್ಲಿ ಆಕ್ಷೇಪಾರ್ಹವಾದ ಪ್ರಕ್ರಿಯೆ ನಡೆಸಲು ದೂರುದಾರನಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಿರುವ 1.5 ಲಕ್ಷ ರೂಪಾಯಿಯನ್ನು ವಸೂಲಿ ಮಾಡಬೇಕು ಎಂದು ನ್ಯಾಯಾಲಯವು ಹೇಳಿದೆ.

“ಅರ್ಜಿದಾರರ ವಿರುದ್ಧ ವರ್ಷದಲ್ಲಿ ಮೂರು ಬಾರಿ ದೂರು ದಾಖಲಿಸಿದ್ದು, ಸಮಾಜ ಕಲ್ಯಾಣ ಇಲಾಖೆಯು ದೂರುದಾರ ಚಂದ್ರು ರಾಠೋಡ್‌ಗೆ 3.5ಲಕ್ಷ ರೂಪಾಯಿ ಪಾವತಿಸಿದೆ. ನಕಲಿ ಪ್ರಕರಣಗಳಿಗೆ ನೆರವಾಗಲು ಸಾರ್ವಜನಿಕರ ಹಣವನ್ನು ನೀಡಲಾಗಿದೆ ಅಥವಾ ಸರ್ಕಾರದ ಸಹಾಯದಿಂದ ನಕಲಿ ಪ್ರಕರಣ ನಡೆಸಲಾಗುತ್ತಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಈ ಕಾರಣಕ್ಕಾಗಿ ಎಸ್‌ಸಿ/ಎಸ್‌ಟಿ ಸಮುದಾಯದವರು ದಾಖಲಿಸುವ ನೈಜ ಪ್ರಕರಣಗಳಿಗೆ ಹಿನ್ನಡೆಯಾಗುತ್ತಿದ್ದು, ಇಂಥ ನಕಲಿ ಪ್ರಕರಣಗಳ ನಡುವೆ ಅವು ಕಳೆದು ಹೋಗುತ್ತಿವೆ. ಈ ನೆಲೆಯಲ್ಲಿ ಸಹಾಯಧನ ನೀಡುವುದಕ್ಕೂ ಮುನ್ನ ದಾಖಲೆಗಳನ್ನು ರಾಜ್ಯ ಸರ್ಕಾರವು ಸೂಕ್ತ ರೀತಿಯಲ್ಲಿ ಪರಿಶೀಲಿಸಬೇಕು. ನೈಜವಾಗಿ ಹಲ್ಲೆಗೆ ಒಳಗಾದವರಿಗೆ ನೆರವು ನೀಡಬೇಕೆ ವಿನಾ ಇಂಥ ನಕಲಿ ದಾವೆದಾರರಿಗಲ್ಲ” ಎಂದು ನ್ಯಾಯಾಲಯವು ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಎಸ್‌ಸಿ/ಎಸ್‌ಟಿ ಕಾಯಿದೆ ದುರ್ಬಳಕೆ ಮಾಡಿಕೊಂಡು ನಕಲಿ ದೂರು ದಾಖಲಿಸುವ ಹವ್ಯಾಸವನ್ನು ದೂರುದಾರ ಬೆಳೆಸಿಕೊಂಡಿದ್ದು, ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸದಿಂದ ಹಣ ಪಡೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ಷೇಪಿಸಿದ್ದರು.

ಪ್ರಕರಣದ ಹಿನ್ನೆಲೆ: ಕೆಲಸಕ್ಕೆ ತೆರಳುತ್ತಿದ್ದಾಗ ಅರ್ಜಿದಾರ ಮತ್ತು ಇತರೆ ಇಬ್ಬರು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸೈಕಲ್‌ ಚೈನ್‌ನಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಿ ಚಂದ್ರು ರಾಠೋಡ್‌ ನೀಡಿದ ದೂರು ಆಧರಿಸಿ ಐಪಿಸಿ ಸೆಕ್ಷನ್‌ಗಳಾದ 323, 342, 504 ಮತ್ತು 506ರ ಅಡಿ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ 3(1)(ಆರ್‌) ಮತ್ತು (ಎಸ್‌) ರ ಅಡಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Shivalingappa Kerakalamatti Vs State of Karnataka.pdf
Preview