ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ನೇತೃತ್ವದ ಉನ್ನತಾಧಿಕಾರ ವಿಚಕ್ಷಣಾ ಮತ್ತು ನಿಗಾ ಸಮಿತಿಯು ಸಭೆ ನಡೆಸಿರುವುದಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ ಗಂಭೀರ ಆಕೇಪ ವ್ಯಕ್ತಪಡಿಸಿದೆ.
ಬೆಂಗಳೂರಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಸ್ಥೆಯು ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಪ್ರತಿ ವರ್ಷದ ಜನವರಿ ಮತ್ತು ಜುಲೈನಲ್ಲಿ ಸಭೆ ನಡೆಸುವುದು ಕಾನೂನಿನ ಅಡಿ ಕಡ್ಡಾಯವಾಗಿದೆ. ಆದರೆ, 2022ರಲ್ಲಿ ಮುಖ್ಯಮಂತ್ರಿ ನೇತೃತ್ವದ ಸಮಿತಿಯು ಒಂದೇ ಒಂದು ಬಾರಿಯೂ ಸಭೆ ನಡೆಸದಿರುವುದಕ್ಕೆ ಪೀಠವು ಅಸಮಾಧಾನ ಹೊರಹಾಕಿತು. ಅಲ್ಲದೇ, 2023ರಲ್ಲಿ ಇದುವರೆಗೂ ಸಭೆ ನಡೆಸದಿರುವುದನ್ನು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.
ಕಾಯಿದೆಯ ನಿಯಮ 16ರ ಅಡಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, 2021ರಲ್ಲಿ ಸಭೆ ನಡೆಸದಿರುವುದಕ್ಕೆ ನ್ಯಾಯಾಲಯವು ಆಕ್ಷೇಪ ವ್ಯಕ್ತಪಡಿಸಿದ್ದರೂ 2022ರಲ್ಲಿ ಸಭೆ ನಡೆಸಲಾಗಿಲ್ಲ ಎಂದು ಪೀಠವು ಹೇಳಿದೆ. ಕಾಯಿದೆ ಅಡಿ ಸಂತ್ರಸ್ಥರಿಗೆ ನೀಡಲಾದ ಪರಿಹಾರ ಮತ್ತು ಪುನರ್ವಸತಿ ಪರಿಶೀಲನೆ ನಡೆಸುವ ಹಾಗೂ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿಚಾರಣೆ, ಕಾಯಿದೆ ಜಾರಿಯಲ್ಲಿ ಅಧಿಕಾರಿಗಳು/ಸಂಬಂಧಿತ ಸಂಸ್ಥೆಯ ಜವಾಬ್ದಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಗಳ ಪರಿಶೀಲನೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ನೇತೃತ್ವದ ಸಮಿತಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ.
ಜಿಲ್ಲಾ ಮಟ್ಟ ಮತ್ತು ಉಪ ವಿಭಾಗೀಯ ಮಟ್ಟದಲ್ಲಿ ವಿಚಕ್ಷಣಾ ಮತ್ತು ನಿಗಾ ಸಮಿತಿ ಸಭೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯು ಮೇಲ್ನೋಟಕ್ಕೆ ತೃಪ್ತಿದಾಯಕವಾಗಿಲ್ಲ ಎಂದು ಪೀಠ ಹೇಳಿದೆ.
ಕಳೆದ ವಿಚಾರಣೆಯಲ್ಲಿ ನ್ಯಾಯಾಲಯ ಎತ್ತಿರುವ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಉತ್ತರಿಸುವ ಬದಲಿಗೆ ವರದಿಗಳು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತೋರಿಸಲು ಆತುರದಲ್ಲಿ ವರದಿ ಸಲ್ಲಿಸಿದಂತೆ ಕಾಣುತ್ತದೆ ಎಂದು ಪೀಠ ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.