Karnataka High Court
Karnataka High Court 
ಸುದ್ದಿಗಳು

ಸಮುದ್ರ ಅಲೆ ತಡೆ ವಿಧಾನದ ಅಳವಡಿಕೆಗೆ ಕೋರಿಕೆ: ಎನ್‌ಜಿಟಿ ಮೆಟ್ಟಿಲೇರಲು ಹೈಕೋರ್ಟ್‌ ಸೂಚನೆ

Bar & Bench

ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ಬೆಟ್ಟಪ್ಪಾಡಿ ಗ್ರಾಮ ಸೇರಿದಂತೆ ರಾಜ್ಯದ ಕರಾವಳಿ ಭಾಗದಲ್ಲಿನ ಸಮುದ್ರ ಸವೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳದ ಮಾದರಿಯಲ್ಲಿ ‘ಸೀ ವೇವ್ ಬ್ರೇಕರ್’ (ಸಮುದ್ರ ಅಲೆ ತಡೆ) ವಿಧಾನ ಅನುಸರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ‘ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ’ (ಎನ್‌ಜಿಟಿ)ಯಲ್ಲಿ ಪರಿಹಾರ ಕಂಡುಕೊಳ್ಳುವಂತೆ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಸಲಹೆ ನೀಡಿದೆ.

ಉಲ್ಲಾಳದ ಮೇಲಂಗಡಿ ನಿವಾಸಿ ಅಬ್ದುಲ್ ಖಾದರ್ ಜಿಲಾನಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾ. ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಅಬೂಬಕರ್ ಶಫಿ ಅವರ ವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಹೇಳಲಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಸಿರು ನ್ಯಾಯ ಮಂಡಳಿ ಸೂಕ್ತ ಹಾಗೂ ಸಕ್ಷಮ ವೇದಿಕೆಯಾಗಿದೆ. ಅರ್ಜಿದಾರರು ಎತ್ತಿರುವಂತಹ ಸಮಸ್ಯೆಗಳಿಗಾಗಿಯೇ ಹಸಿರು ನ್ಯಾಯ ಮಂಡಳಿ ರಚನೆಯಾಗಿದೆ. ಆದ್ದರಿಂದ, ಹಸಿರು ನ್ಯಾಯ ಮಂಡಳಿಯಲ್ಲಿಯೇ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಅರ್ಜಿದಾರರಿಗೆ ಸಲಹೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಅರ್ಜಿದಾರರ ಪರ ವಕೀಲ ಪಿ. ಅಬ್ದುಲ್ ಅನ್ಸಾರ್ ವಕಾಲತ್ತು ವಹಿಸಿದ್ದರು.

ಬೆಟ್ಟಪ್ಪಾಡಿ ಗ್ರಾಮ ಸೇರಿದಂತೆ ರಾಜ್ಯದ ಕರಾವಳಿ ತಟದ ಗ್ರಾಮಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಮೀನುಗಾರರು ಸಮುದ್ರ ಸವೇತದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಅವರ ಜೀವನ ಮತ್ತು ಜೀವನೋಪಾಯ ಎರಡೂ ಅತಂತ್ರವಾಗಿದೆ. ಇದು ಪರಿಸರದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಸಮುದ್ರ ಸವೆತಕ್ಕೆ ಬಂಧರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರತಿ ವರ್ಷ ಬಂಡೆಗಳು ಮತ್ತು ಟೆಟ್ರಾಪಾಡ್‌ಗಳನ್ನು ಹಾಕುತ್ತದೆ. ಇದಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಆಗುತ್ತದೆ. ಆದರೂ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆದ್ದರಿಂದ, ಈ ಸಮುದ್ರ ಸವೆತ ತಡೆಯಲು ನೆರೆಯ ಕೇರಳ ರಾಜ್ಯದ ಮಾದರಿಯಲ್ಲಿ  ‘ಸೀ ವೇವ್ ಬ್ರೇಕರ್’ (ಸಮುದ್ರ ಅಲೆ ತಡೆ) ವಿಧಾನದಂತಹ ತಂತ್ರಜ್ಞಾನ ಆಧಾರಿತ ಆಧುನಿಕ ವಿಧಾನವನ್ನು ಅನುಸರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಕೇರಳ ಮಾದರಿ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಿಂದ ಕೂಡಿದೆ ಅರ್ಜಿದಾರರು ಮನವಿ ಮಾಡಿದ್ದರು. ಅರ್ಜಿ ಇತ್ಯರ್ಥವಾಗುವ ತನಕ ಬಂಡೆಗಳು ಮತ್ತು ಟೆಟ್ರಾಪಾಡ್‌ಗಳನ್ನು ಹಾಕುವುದಕ್ಕೆ, ಸಮುದ್ರ ತೀರದಲ್ಲಿ ಬೂದು ಬಣ್ಣದ ದಿಬ್ಬಗಳನ್ನು ನಿರ್ಮಿಸುವುದಕ್ಕೆ ತಡೆ ನೀಡಬೇಕು ಎಂದೂ ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದರು.