NCDRC 
ಸುದ್ದಿಗಳು

ಸೀಟ್ ಬೆಲ್ಟ್ ಹಾಕದೇ ಇದ್ದ ಕಾರಣಕ್ಕೆ ಏರ್‌ಬ್ಯಾಗ್‌ ನಿಷ್ಕ್ರಿಯ: ಪ್ರಯಾಣಿಕನಿಗೆ ಪರಿಹಾರ ನಿರಾಕರಿಸಿದ ಎನ್‌ಸಿಡಿಆರ್‌ಸಿ

ಏರ್‌ಬ್ಯಾಗ್‌ ತೆರೆದುಕೊಳ್ಳಬೇಕೆಂದರೆ ಸೀಟ್‌ಬೆಲ್ಟ್‌ ಹಾಕುವ ಅಗತ್ಯವಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಪೂರಕ ಸಾಕ್ಷ್ಯಾಧಾರಗಳಿಲ್ಲ ಎಂದಿತು ಆಯೋಗ.

Bar & Bench

ಅಪಘಾತದಲ್ಲಿ ರಕ್ಷಣೆ ಒದಗಿಸುವ ಏರ್‌ಬ್ಯಾಗ್‌ಗಳು ಕಾರ್ಯ ನಿರ್ವಹಿಸದೆ ಇದ್ದುದರಿಂದ ಕಾರು ತಯಾರಿಕಾ ಕಂಪೆನಿ ಹೋಂಡಾಗೆ ರಾಜ್ಯ ಗ್ರಾಹಕ ಆಯೋಗವೊಂದು ವಿಧಿಸಿದ್ದ ₹1 ಲಕ್ಷ ದಂಡವನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈಚೆಗೆ ರದ್ದುಗೊಳಿಸಿದೆ [ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮತ್ತು ಉಷಾತ್‌ ಗುಲ್ಗುಲೆ ನಡುವಣ ಪ್ರಕರಣ].

ಸೀಟ್‌ ಬೆಲ್ಟ್‌ ಹಾಕದೇ ಇದ್ದ ಕಾರಣಕ್ಕಾಗಿ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದೇ ಹೋದುದನ್ನು ಗಮನಿಸಿದ ಆಯೋಗದ ಅಧ್ಯಕ್ಷತೆ ವಹಿಸಿದ್ದ ಸದಸ್ಯ ಸುಭಾಷ್ ಚಂದ್ರ ಮತ್ತು ಸದಸ್ಯೆ ಸಾಧನಾ ಶಂಕರ್ ಅವರು ಈ ನಿರ್ಧಾರ ಪ್ರಕಟಿಸಿದರು.

ಸೀಟ್‌ ಬೆಲ್ಟ್‌ಗಳನ್ನು ಪ್ರಯಾಣಿಕರು ಧರಿಸಿದರಷ್ಟೇ ಕಾರ್‌ನ ಏರ್‌ಬ್ಯಾಗ್‌ಗಳು ಕಾರ್ಯ ನಿರ್ವಹಿಸುತ್ತವೆ.

ಏರ್‌ಬ್ಯಾಗ್ ತೆರೆದುಕೊಳ್ಳಬೇಕೆಂದರೆ ಸೀಟ್‌ಬೆಲ್ಟ್ ಹಾಕುವ ಅಗತ್ಯವಿಲ್ಲ ಎಂಬ ಅರ್ಜಿದಾರರ ವಾದಕ್ಕೆ ಪೂರಕ ಸಾಕ್ಷ್ಯಾಧಾರಗಳಿಲ್ಲ. ಕಾರ್‌ ತಯಾರಿಕೆಯಲ್ಲಿ ದೋಷ ಇದೆ ಎಂಬ ರಾಜ್ಯ ಆಯೋಗದ ಅವಲೋಕನಕ್ಕೂ ಪೂರಕ ದಾಖಲೆಗಳಿಲ್ಲ. ಆದ್ದರಿಂದ ವಾಸ್ತವಾಂಶ ಇಲ್ಲವೇ ಈ ಹಿಂದಿನ ತೀರ್ಪುಗಳು ಇಲ್ಲದೆ ಪರಿಹಾರ ನೀಡಲು ಆಗದು ಎಂದು ವೇದಿಕೆ ನುಡಿಯಿತು.

ದೂರುದಾರರು ಪುಣೆಯಲ್ಲಿ ಹೋಂಡಾ ಸಿವಿಕ್‌ ಕಾರು ಖರೀದಿಸಿದ್ದರು. 2013ರಲ್ಲಿ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಅಪಘಾತಕ್ಕೀಡಾಗಿ ಕಾರಿನ ಮುಂಭಾಗ ಹಾಳಾಗಿತ್ತು. ಜೊತೆಗೆ ದೂರುದಾರನ ಎಡಗೈ ಮತ್ತು ಭುಜಕ್ಕೆ ಗಾಯವಾಗಿತ್ತು. ಅವರು ₹ 40,000 ವೈದ್ಯಕೀಯ ವೆಚ್ಚ ಭರಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಅವರು ರಾಜ್ಯ ಆಯೋಗದ ಮೆಟ್ಟಿಲೇರಿದ್ದರು.

ಏರ್‌ಬ್ಯಾಗ್‌ ಸಕ್ರಿಯವಾಗಲು ಪ್ರಯಾಣಿಕರು ಸೀಟ್‌ ಬೆಲ್ಟ್‌ ಹಾಕಿರಬೇಕು. ಹಾಗಿದ್ದರೂ ದೂರುದಾರ ಬೆಲ್ಟ್‌ ಧರಿಸಿರಲಿಲ್ಲ. ದೂರುದಾರನ ತಪ್ಪಿದ್ದರೂ ತಾನು ಕಾರನ್ನು ದುರಸ್ತಿ ಮಾಡಿಕೊಟ್ಟಿರುವುದಾಗಿ ಹೋಂಡಾ ವಾದಿಸಿತ್ತು.

ಆದರೆ ಹೋಂಡಾ ವಾದಕ್ಕೆ ತಜ್ಞರ ಪೂರಕ ಅಭಿಪ್ರಾಯವಿಲ್ಲ ಎಂದಿದ್ದ ರಾಜ್ಯ ಗ್ರಾಹಕರ ಪರಿಹಾರ ಆಯೋಗ ದೂರುದಾರರ ಪರವಾಗಿ ತೀರ್ಪು ನೀಡಿತ್ತು. ಇದನ್ನು ಹೋಂಡಾ ಎನ್‌ಸಿಡಿಆರ್‌ಸಿಯಲ್ಲಿ ಪ್ರಶ್ನಿಸಿತ್ತು.

ವಾದಗಳನ್ನು ಆಲಿಸಿದ ನ್ಯಾಯಾಲಯ ಹೋಂಡಾದ ಮೇಲ್ಮನವಿಯನ್ನು ಪುರಸ್ಕರಿಸಿ ರಾಜ್ಯ ಆಯೋಗದ ಆದೇಶ ರದ್ದುಗೊಳಿಸಿತು.