SEBI, Anil Ambani 
ಸುದ್ದಿಗಳು

ಅನಿಲ್‌ ಅಂಬಾನಿಗೆ ಷೇರುಪೇಟೆಯಿಂದ 5 ವರ್ಷ ನಿಷೇಧ, ₹25 ಕೋಟಿ ದಂಡ ವಿಧಿಸಿದ ಸೆಬಿ

ಸಾವಿರಾರು ಕೋಟಿ ಮೊತ್ತದ ಹಣವನ್ನು ಆರ್‌ಎಚ್‌ಎಫ್‌ಎಲ್‌ನಿಂದ ರಿಲಯನ್ಸ್‌ ಎಡಿಎ ಸಮೂಹದ ದುರ್ಬಲವಾದ ಕಂಪೆನಿಗಳಿಗೆ ಹರಿಸುವ ಸಲುವಾಗಿ ಯೋಜಿತ ಸಂಚು ಕೈಗೊಂಡಿರುವುದು ಸೆಬಿಯ ತನಿಖೆಯಿಂದ ತಿಳಿದು ಬಂದಿದೆ.

Bar & Bench

ಉದ್ಯಮಿ ಅನಿಲ್‌ ಅಂಬಾನಿ ಸಹಿತ 24 ವ್ಯಕ್ತಿ, ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳ ಕಾಲ ಷೇರುಪೇಟೆಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಷೇರುಪೇಟೆ ನಿಯಂತ್ರಕ ಮಂಡಳಿಯಾದ ಸೆಬಿ ನಿಷೇಧ ಹೇರಿದೆ. ರಿಲಯನ್ಸ್‌ ಹೋಮ್‌ ಫೈನಾನ್ಸ್‌ನಿಂದ (ಆರ್‌ಎಚ್‌ಎಫ್‌ಎಲ್‌) ವಂಚನೆಯ ಮಾರ್ಗದ ಮೂಲಕ ಹಣವನ್ನು ಬೇರೆ ಕಡೆಗೆ ಹರಿಸಿದ ಗುರುತರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿರುವುದಾಗಿ ಸೆಬಿ ತಿಳಿಸಿದೆ.

ಐದು ವರ್ಷಗಳ ನಿಷೇಧ ಹೇರುವುದರೊಟ್ಟಿಗೆ ಸೆಬಿಯು ಉದ್ಯಮಿ ಅನಿಲ್‌ ಅಂಬಾನಿಗೆ ₹25 ಕೋಟಿ ದಂಡವನ್ನೂ ವಿಧಿಸಿದೆ. ಅಲ್ಲದೆ, ಮುಂದಿನ ಐದು ವರ್ಷಗಳ ಕಾಲ ಯಾವುದೇ ಕಂಪೆನಿಯ ನಿರ್ದೇಶಕರಾಗಿ ಅಥವಾ ನಿರ್ವಹಣಾ ಹುದ್ದೆಗಳಲ್ಲಿ ಸೇವೆ ಸಲ್ಲಿಸದಂತೆಯೂ ನಿಷೇಧ ಹೇರಿದೆ.

ಆರ್‌ಎಚ್‌ಎಫ್‌ಎಲ್‌ ಸಂಸ್ಥೆಯು ₹9,295.25 ಕೋಟಿಯಷ್ಟು ಗಣನೀಯ ಮೊತ್ತದ ಹಣವನ್ನು 45 ಸಂಸ್ಥೆಗಳ ಸಾಮಾನ್ಯ ಬಂಡವಾಳ ವೆಚ್ಚದ ಸಾಲಗಳಿಗಾಗಿ (ಜಿಪಿಸಿಎಲ್‌) ನೀಡಿತ್ತು. ಇದರಲ್ಲಿ ₹4,944.34 ಕೋಟಿ ಹಣವನ್ನು ನಿರ್ದಿಷ್ಟ ಜಿಪಿಸಿಎಲ್‌ ಸಂಸ್ಥೆಗಳಿಗೆ ನೀಡಿದ್ದು ಈ ಸಂಸ್ಥೆಗಳು ₹4,013.43 ಕೋಟಿ ಹಣವನ್ನು ತಮ್ಮದೇ ಪ್ರಾಯೋಜಿತ ಸಂಸ್ಥೆಗಳಿಗೆ ನೀಡಿರುವುದು ಸೆಬಿಯ ತನಿಖೆಯಿಂದ ತಿಳಿದು ಬಂದಿತ್ತು.

ಅಷ್ಟೇ ಅಲ್ಲದೆ, ಈ ಹಣ ವರ್ಗಾವಣೆಗಳೆಲ್ಲವೂ ಆರ್‌ಎಚ್‌ಎಫ್‌ಎಲ್‌ನಿಂದ ರಿಲಯನ್ಸ್‌ ಎಡಿಎ ಸಮೂಹದ ದುರ್ಬಲವಾದ ಕಂಪೆನಿಗಳಿಗೆ ಹಣವನ್ನು ಹರಿಸುವ ಸಲುವಾಗಿ ಕೈಗೊಳ್ಳಲಾದ ಯೋಜಿತ ಸಂಚಿನ ಭಾಗವಾಗಿರುವುದನ್ನು ಸೆಬಿಯು ತನ್ನ ತನಿಖೆಯ ವೇಳೆ ಕಂಡುಕೊಂಡಿತ್ತು. ಇದೆಲ್ಲದರ ಪರಿಣಾಮ ಅಂತಿಮವಾಗಿ ಸೆಪ್ಟೆಂಬರ್‌ 30, 2021ರ ವೇಳೆಗೆ ₹6,931.31 ಕೋಟಿಯಷ್ಟು ಹಣ ನಿರುತ್ಪಾದಕ ಆಸ್ತಿಯಾಗಿ ಪರಿಣಮಿಸಿತು.

ತನಿಖೆಯ ವೇಳೆ ಆರ್‌ಎಚ್‌ಎಫ್‌ಎಲ್‌ ಸಂಸ್ಥೆಯಲ್ಲಿ ಹಲವು ಗಂಭೀರ ಆಡಳಿತಾತ್ಮಕ ಲೋಪಗಳು ನಡೆದಿರುವುದು ಬಹಿರಂಗಗೊಂಡಿದೆ. ಆಡಳಿತ ಮಂಡಳಿಯ ನಿರ್ದೇಶಕರು ಕೆಲ ನಿರ್ದಿಷ್ಟ ಸಂಸ್ಥೆಗಳಿಗೆ ಸಾಲವನ್ನು ನೀಡದಂತೆ ನಿರ್ದೇಶನಗಳನ್ನು ನೀಡಿದ್ದರೂ ಸಹ ಅದೆಲ್ಲವನ್ನೂ ಸಂಸ್ಥೆಯ ಪ್ರಧಾನ ಕಾರ್ಯನಿರ್ವಹಣಾ ಹುದ್ದೆಗಳಲ್ಲಿದ್ದ ಅಮಿತ್‌ ಬಾಪ್ನಾ, ರವೀಂದ್ರ ಸುಧಾಲ್ಕರ್‌, ಪಿಂಕೇಶ್ ಆರ್ ಶಾ ಮುಂತಾದವರು ಗಾಳಿಗೆ ತೂರಿ ನಿರ್ಧಾರಗಳನ್ನು ಕೈಗೊಂಡಿರುವುದು ಪತ್ತೆಯಾಗಿದೆ.

ಈ ಎಲ್ಲ ವಂಚಕ ಯೋಜನೆಗಳ ಹಿಂದೆ ಅನಿಲ್‌ ಅಂಬಾನಿಯವರು ಮಾಸ್ಟರ್‌ ಮೈಂಡ್‌ ಆಗಿ ಕೆಲಸ ಮಾಡಿದ್ದರು ಎಂದು ಶಾಸನಾತ್ಮಕ ಲೆಕ್ಕ ಪರಿಶೋಧಕ ಸಂಸ್ಥೆ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ (ಪಿಡಬ್ಲ್ಯುಸಿ) ಹಾಗೂ ಫೋರೆನ್ಸಿಕ್‌ ಲೆಕ್ಕ ಪರಿಶೋಧನಾ ಸಂಸ್ಥೆ ಗ್ರ್ಯಾಂಟ್‌ ಥಾರ್ನ್‌ಟನ್ ತಿಳಿಸಿವೆ.