ಸುದ್ದಿಗಳು

ಹಣಕಾಸು ವ್ಯವಹಾರದ ತಪ್ಪು ಮಾಹಿತಿ: ಬಾಂಬೆ ಡೈಯಿಂಗ್, ವಾಡಿಯಾರಿಗೆ ಷೇರು ಮಾರುಕಟ್ಟೆಯಿಂದ 2 ವರ್ಷ ನಿಷೇಧ ಹೇರಿದ ಸೆಬಿ

Bar & Bench

ತಮ್ಮ ಹಣಕಾಸು ವ್ಯವಹಾರಗಳ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಜವಳಿ ತಯಾರಕ ಕಂಪೆನಿ ಬಾಂಬೆ ಡೈಯಿಂಗ್‌ ಮತ್ತದರ ಪ್ರವರ್ತಕರಾದ ನುಸ್ಲಿ ವಾಡಿಯಾ, ನೆಸ್ ವಾಡಿಯಾ ಹಾಗೂ ಜಹಾಂಗೀರ್ ವಾಡಿಯಾ ಅವರು ಎರಡು ವರ್ಷಗಳ ಕಾಲ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸದಂತೆ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ನಿರ್ಬಂಧ ವಿಧಿಸಿದೆ.

ಅಲ್ಲದೆ ನಿರ್ದೇಶಕ ಹುದ್ದೆ, ಅಥವಾ ಮುಖ್ಯ ವ್ಯವಸ್ಥಾಪಕ ಹುದ್ದೆ ಇಲ್ಲವೇ ಸೆಬಿಯಲ್ಲಿ ನೋಂದಾಯಿತ ಮಧ್ಯವರ್ತಿತ್ವ ಸೇರಿದಂತೆ ಷೇರುಮಾರುಕಟ್ಟೆಯೊಂದಿಗೆ ಯಾವುದೇ ರೀತಿಯ ನಂಟು ಇರಿಸಿಕೊಳ್ಳುವುದನ್ನು ಕೂಡ ಒಂದು ವರ್ಷದ ಮಟ್ಟಿಗೆ ಸೆಬಿ ನಿಷೇಧಿಸಿದೆ. ಬಾಂಬೆ ಡೈಯಿಂಗ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ ದುರ್ಗೇಶ್ ಮೆಹ್ತಾ ಮತ್ತು ವಾಡಿಯಾ ಸಮೂಹಕ್ಕೆ ಸೇರಿದ  ಸ್ಕಾಲ್‌ ಸರ್ವೀಸಸ್‌ ಲಿಮಿಟೆಡ್‌ ಮತ್ತದರ ನಿರ್ದೇಶಕರಿಗೂ ಇದೇ ರೀತಿಯ ನಿಷೇಧ ವಿಧಿಸಲಾಗಿದೆ.

ಸೆಬಿಯು ಬಾಂಬೆ ಡೈಯಿಂಗ್‌ಗೆ ₹ 2.25 ಕೋಟಿ, ನುಸ್ಲಿ ವಾಡಿಯಾಗೆ ₹ 4 ಕೋಟಿ, ನೆಸ್ ವಾಡಿಯಾಗೆ ₹ 2 ಕೋಟಿ ಹಾಗೂ ಜಹಾಂಗೀರ್ ವಾಡಿಯಾಗೆ ₹ 4 ಕೋಟಿ ದಂಡ ವಿಧಿಸಿದೆ. ಸೆಬಿಯ ಪೂರ್ಣಾವಧಿ ಸದಸ್ಯ ಅನಂತ ಬರುವಾ ಅವರು ಈ ಆದೇಶ ಹೊರಡಿಸಿದ್ದಾರೆ.

ಸೆಬಿಬಾಂಬೆ ಡೈಯಿಂಗ್ ಮತ್ತು ಸ್ಕೇಲ್‌ ವಿರುದ್ಧ ಕೇಳಿಬಂದ ದೂರುಗಳ ಆಧಾರದ ಮೇಲೆ ಸೆಬಿ ತನಿಖೆ ಆರಂಭಿಸಿತ್ತು. ಏಳು ವರ್ಷಗಳ ಕಾಲ ಅಂದರೆ 2011-12ರಿಂದ 2017-18ರವರೆಗೆ ಬಾಂಬೆ ಡೈಯಿಂಗ್‌ಗೆ ಸೇರಿದ ಫ್ಲಾಟ್‌ಗಳನ್ನು ವಾಡಿಯಾ ಸಮೂಹಕ್ಕೆ ಸೇರಿದ ಸ್ಕೇಲ್‌ ಅಸಲಿ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಅಂದರೆ ₹2,492.94 ಕೋಟಿಗೆ ಮಾರಾಟ ಮಾಡಿದ್ದು ₹1,302.20 ಕೋಟಿಯಷ್ಟು ಲಾಭ ಮಾಡಿಕೊಂಡಿತ್ತು. ಆ ಮೂಲಕ ಬಾಂಬೆ ಡೈಯಿಂಗ್‌ ಕಂಪೆನಿಯ ಹಣಕಾಸು ವ್ಯವಹಾರದ ಬಗ್ಗೆ ತಪ್ಪು ಮಾಹಿತಿ ನೀಡಿರುವುದನ್ನು ಸೆಬಿ ಪತ್ತೆ ಹಚ್ಚಿತ್ತು.

ಸ್ಕೇಲ್‌ನಲ್ಲಿ ಬಾಂಬೆ ಡೈಯಿಂಗ್‌ ಕೇವಲ  ಶೇ 19ರಷ್ಟು ಷೇರು ಹೊಂದಿದ್ದರೂ ಕೂಡ ಇತರೆ ಷೇರುದಾರರನ್ನು ಬಳಸಿಕೊಂಡು ಪರೋಕ್ಷವಾಗಿ ಸ್ಕೇಲ್‌ನ ಎಲ್ಲಾ ಷೇರು ಬಂಡವಾಳದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯವಾಗುವಂತೆ ಸ್ಕೇಲ್‌ನ ಷೇರು ರಚನೆಯನ್ನು ಉದ್ದೇಶಪೂರ್ವಕವಾಗಿ ಮೋಸದಾಯಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.