ಸುದ್ದಿಗಳು

ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಇಲ್ಲದೆ ಉತ್ತೀರ್ಣ: ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರ ವರದಿ

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಎರಡನೇ ಪಿಯುಸಿ ಫಲಿತಾಂಶವನ್ನು ಜುಲೈ 31ರ ಮೊದಲು ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

Bar & Bench

ಪರೀಕ್ಷೆ ಇಲ್ಲದೆ ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಈ ಹಿಂದೆ ಗಳಿಸಿದ ಅಂಕಗಳ ಜೊತೆಗೆ ಅವರಿಗೆ ಕೃಪಾಂಕ ನೀಡಿ ಉತ್ತೀರ್ಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

" 2 ಮತ್ತು 3 ನೇ ವರ್ಗದ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ, ಕನಿಷ್ಠ ಶೇಕಡಾ 5 ರಷ್ಟು ಕೃಪಾಂಕ ನೀಡುವ ಮೂಲಕ ಅವರನ್ನು ತೇರ್ಗಡೆ ಮಾಡಲು ನಿರ್ಧರಿಸಲಾಗಿದೆ" ಎಂದು ಅಫಿಡವಿಟ್ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ ಅಂಕಗಳಿಗೆ ಶೇ 45, ಪ್ರಥಮ ಪಿಯು ಅಂಕಗಳಿಗೆ ಶೇ 45, ಮತ್ತು ದ್ವಿತೀಯ ಪಿಯು ಆಂತರಿಕ ಮೌಲ್ಯಮಾಪನ ಅಂಕಗಳಿಗೆ ಶೇ 10ರಷ್ಟು ಹೆಚ್ಚುವರಿ ಅಂಕ ನೀಡುವ ಮೂಲಕ ಎರಡನೇ ವರ್ಷದ ಪಿಯು ಕೋರ್ಸ್‌ಗಳ ರೆಗ್ಯುಲರ್‌ ಅಥವಾ ಫ್ರೆಶರ್‌ (ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸುತ್ತಿರುವವರು) ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು ಎಂದು ಸರ್ಕಾರ ವಿವರಿಸಿದೆ.

ಇದನ್ನು ಆಲಿಸಿದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಕೋವಿಡ್‌ ಹಿನ್ನೆಲೆಯಲ್ಲಿ ಪುನರಾವರ್ತಿತರು (ರಿಪೀಟರ್ಸ್‌), ಖಾಸಗಿ ವಿದ್ಯಾರ್ಥಿಗಳು ಮತ್ತು ಹೊಸಬರನ್ನು (ಫ್ರೆಶರ್ಸ್‌) ಉತ್ತೀರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಭಿನ್ನ ಮಾನದಂಡ ಅನುಸರಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿತು.

ರಿಪೀಟರ್‌ಗಳಾಗಿ ಪರೀಕ್ಷೆ ಬರೆಯುತ್ತಿರುವ ಖಾಸಗಿ ಅಭ್ಯರ್ಥಿಗಳಿಗೆ ಸಹ ಕೃಪಾಂಕ ನೀಡಿ ಉತ್ತೀರ್ಣರೆಂದು ಘೋಷಿಸಲಾಗುವುದು. ಆದರೆ ಮೊದಲ ಬಾರಿಗೆ ಎರಡನೇ ಪಿಯುಸಿ ಪರೀಕ್ಷೆಗೆ ಹಾಜರಾಗುತ್ತಿರುವ ಖಾಸಗಿ ಅಭ್ಯರ್ಥಿಗಳು ಕೋವಿಡ್‌ ಪರಿಸ್ಥಿತಿ ಇಳಿಮುಖವಾದ ಬಳಿಕ ನಡೆಸಲಾಗುವ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿತು.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಎರಡನೇ ಪಿಯುಸಿ ಫಲಿತಾಂಶವನ್ನು ಜುಲೈ 31ರ ಮೊದಲು ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಕುರಿತು ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಕೂಡದು ಎಂದು ನ್ಯಾಯಾಲಯ ಜೂನ್‌ 17ರಂದು ಆದೇಶಿಸಿತ್ತು.

ಮೊದಲ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ ಎರಡನೇ ಪಿಯು ರೆಗ್ಯುಲರ್‌/ ಫ್ರೆಶರ್‌ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ಪುನರಾವರ್ತಿತರಿಗೆ ಮಾತ್ರ ಪರೀಕ್ಷೆ ನಡೆಸಲು ತೀರ್ಮಾನಿಸಿ ಜೂನ್‌ 3ರಂದು ಅದು ಅಧಿಸೂಚನೆ ಹೊರಡಿಸಿತ್ತು.