students 
ಸುದ್ದಿಗಳು

ಪೋಷಕರ ಒತ್ತಡ ತಾಳಲಾರದೆ ಮನೆ ತೊರೆದಿದ್ದ ದ್ವಿತೀಯ ಪಿಯು ವಿದ್ಯಾರ್ಥಿ ಸಿಡಬ್ಲ್ಯುಸಿ ಸುಪರ್ದಿಗೆ: ಸರ್ಕಾರದ ವಿವರಣೆ

“ಪೋಷಕರು ಪರೀಕ್ಷೆ ವಿಚಾರದಲ್ಲಿ ಒತ್ತಡ ಹೇರುತ್ತಿದ್ದ ಕಾರಣದಿಂದಲೇ ದಿಗಂತ್‌ ಮನೆಬಿಟ್ಟು ಹೋಗಿದ್ದಾನೆ” ಎಂದು ಪೀಠಕ್ಕೆ ತಿಳಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ.

Bar & Bench

ದ್ವಿತೀಯ ಪಿಯು ಪರೀಕ್ಷೆ ವಿಚಾರದಲ್ಲಿ ಪೋಷಕರ ಒತ್ತಡ ತಾಳಲಾರದೆ ಮನೆ ತೊರೆದಿದ್ದ ಬಂಟ್ವಾಳದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್‌ ಅನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಸುಪರ್ದಿಗೆ ನೀಡಲಾಗಿದ್ದು, ಪೋಷಕರ ಜೊತೆಗೆ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ರಾಜ್ಯ ಸರ್ಕಾರ ವಿವರಿಸಿದೆ.

ನಾಪತ್ತೆಯಾಗಿರುವ ಪುತ್ರ ದಿಗಂತ್‌ ಅನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ತಂದೆ ಪದ್ಮನಾಭ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ್‌ ರಾವ್‌ ಮತ್ತು ಟಿ ಎಂ ನದಾಫ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ದಿಂಗತ್‌ನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ತಾನು ಪೋಷಕರ ಬಳಿಗೆ ಹೋಗುವುದಿಲ್ಲ ಎಂದು ದಿಗಂತ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಇದರಿಂದ ಆತನನ್ನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಸುಪರ್ದಿಗೆ ನೀಡಲಾಗಿದೆ. ಪ್ರಕರಣವು ಸಿಡಬ್ಲ್ಯುಸಿ ಮುಂದೆ ಬಾಕಿಯಿದೆ. ದಿಗಂತ್‌ ಯಾರ ಅಕ್ರಮ ಬಂಧನದಲ್ಲೂ ಇರಲಿಲ್ಲ. ನಾಪತ್ತೆಯಾಗಿರುವುದಾಗಿ ಅರ್ಜಿದಾರರು ಹೇಳಿದ್ದರು. ಸದ್ಯ ದಿಗಂತ್‌ ಪತ್ತೆಯಾಗಿರುವ ಕಾರಣ ಅರ್ಜಿ ವಿಚಾರಣೆ ಮಾನ್ಯತೆ ಕಳೆದುಕೊಂಡಿದೆ” ಎಂದು ಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪರ ವಕೀಲರು “ದಿಗಂತ್‌ ಮನೆಗೆ ಹೋಗುವುದಿಲ್ಲ ಎಂದು ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅದರಲ್ಲಿ ಸತ್ಯಾಂಶವಿಲ್ಲ. ಪುತ್ರನೊಂದಿಗೆ ಸಮಾಲೋಚಿಸಲು ಅರ್ಜಿದಾರರಿಗೆ ಸೂಕ್ತ ಸಮಯಾವಕಾಶ ಕಲ್ಪಿಸಿಲ್ಲ. ಮಗನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅರ್ಜಿದಾರರು ಸಿದ್ಧರಿದ್ದಾರೆ” ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ದಿಗಂತ್‌ನನ್ನು ಸುಪರ್ದಿಯಲ್ಲಿ ಇರಿಸಿಕೊಳ್ಳುವ ಅಗತ್ಯ ಸರ್ಕಾರಕ್ಕೆ ಇಲ್ಲ. ಸದ್ಯ ವಿದ್ಯಾರ್ಥಿ ಸಿಡಬ್ಲ್ಯುಸಿ ಸುಪರ್ದಿಯಲ್ಲಿದ್ದು, ಅದರ ಮುಂದಿನ ಪ್ರಕ್ರಿಯೆ ನಡೆಯಲಿದೆ. ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಲಾಗುವುದು. ಅಂದು ಸಿಡಬ್ಲ್ಯುಸಿ ವಿಚಾರಣಾ ವರದಿಯನ್ನು ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸಬೇಕು” ಎಂದಿತು.

ಇದಕ್ಕೆ ಅರ್ಜಿದಾರರ ಪರ ವಕೀಲರು “ಸದ್ಯ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದೆ. ಕೆಲವೊಂದು ವಿಷಯಗಳ ಪರೀಕ್ಷೆ ಬಾಕಿಯಿದ್ದು, ಪರೀಕ್ಷೆ ಬರೆಯಲು ದಿಗಂತ್‌ ಬಯಸಿದರೆ ಅದಕ್ಕೆ ಅವಕಾಶ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಪೋಷಕರು ಪ್ರಯತ್ನ ನಡೆಸುತ್ತಾರೆ” ಎಂದರು.

ಇದಕ್ಕೆ ಬೆಳ್ಳಿಯಪ್ಪ ಅವರು “ಪೋಷಕರು ಪರೀಕ್ಷೆ ವಿಚಾರದಲ್ಲಿ ಒತ್ತಡ ಹೇರುತ್ತಿದ್ದ ಕಾರಣದಿಂದಲೇ ದಿಗಂತ್‌ ಮನೆಬಿಟ್ಟು ಹೋಗಿದ್ದಾನೆ” ಎಂದು ಪೀಠದ ಗಮನ ಸೆಳೆದರು.

ಇದರಿಂದ ಅಸಮಾಧಾನಗೊಂಡ ಪೀಠವು “ಹೀಗೇಕೆ ಮಾಡುತ್ತೀರಿ? ಆ ರೀತಿ ಒತ್ತಡ ಹಾಕಬಾರದು. ಮೊದಲು ಸಿಡಬ್ಲ್ಯುಸಿ ಮುಂದಿನ ಪ್ರಕ್ರಿಯೆ ನಡೆಯಲಿ” ಎಂದು ಅರ್ಜಿದಾರರಿಗೆ ಸೂಚಿಸಿತು.

ಅರ್ಜಿದಾರರ ಪರ ವಕೀಲರ ಮನವಿ ಪರಿಗಣಿಸಿದ ಬೆಳ್ಳಿಯಪ್ಪ ಅವರು “ಗುರುವಾರ (ಇಂದು) ದಿಂಗತ್‌ ಮತ್ತು ಪೋಷಕರ ಭೇಟಿ-ಸಮಾಲೋಚನೆಗೆ ವ್ಯವಸ್ಥೆ ಮಾಡಲಾಗುವುದು” ಎಂದರು.

ಸರ್ಕಾರದ ಪ್ರಮಾಣಪತ್ರ ದಾಖಲಿಸಿಕೊಂಡ ಪೀಠವು “ದಿಗಂತ್‌ ಮತ್ತು ಪೋಷಕರ ಭೇಟಿಗೆ ವ್ಯವಸ್ಥೆ ಕಲ್ಪಿಸಬೇಕು. ಮುಂದಿನ ವಿಚಾರಣೆ ವೇಳೆ ಪ್ರಕರಣದ ಬೆಳವಣಿಗೆಗಳ ಮಾಹಿತಿ ನೀಡಬೇಕು” ಎಂದು ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ಮಾರ್ಚ್‌ 19ಕ್ಕೆ ಮುಂದೂಡಿತು.