H D Kumaraswamy and Radhika Kumaraswamy 
ಸುದ್ದಿಗಳು

ಪತ್ನಿ ರಾಧಿಕಾ, ಪುತ್ರಿ ಶರ್ಮಿಕಾ ಮಾಹಿತಿ ಮುಚ್ಚಿಟ್ಟ ಆರೋಪ: ಎಚ್‌ಡಿಕೆ ವಿರುದ್ಧದ ದೂರು ವಜಾಗೊಳಿಸಿದ ಕೋರ್ಟ್

ಯಾವುದೇ ದಾಖಲೆ ಸಲ್ಲಿಸದೇ ರಾಧಿಕಾ ಅವರು ಕುಮಾರಸ್ವಾಮಿ ಅವರ ಎರಡನೇ ಪತ್ನಿ ಎಂದು ದೂರುದಾರರು ಹೇಳುವುದನ್ನು ಆಧರಿಸಿ ಈ ಹಂತದಲ್ಲಿ ನ್ಯಾಯಾಲಯವು ಕುಮಾರಸ್ವಾಮಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಲಾಗದು ಎಂದಿರುವ ನ್ಯಾಯಾಲಯ.

Siddesh M S

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ತಮ್ಮ ಉಮೇದುವಾರಿಕೆಯ ಜೊತೆ ತಪ್ಪು ಅಫಿಡವಿಟ್‌ ಸಲ್ಲಿಸಿದ್ದು, ಎರಡನೇ ಪತ್ನಿ ರಾಧಿಕಾ ಹಾಗೂ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಪುತ್ರಿ ಶರ್ಮಿಕಾ ಅವರ ಮಾಹಿತಿ ಬಚ್ಚಿಡುವ ಮೂಲಕ ಪ್ರಮಾದ ಎಸಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶಿಸುವಂತೆ ಕೋರಿದ್ದ ಖಾಸಗಿ ದೂರನ್ನು ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಈಚೆಗೆ ವಜಾ ಮಾಡಿದೆ.

ಬೆಂಗಳೂರಿನ ಎಸ್‌ ಆನಂದ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಜೆ ಪ್ರೀತ್‌ ಅವರು ವಜಾ ಮಾಡಿದ್ದಾರೆ.

“ಯಾವುದೇ ದಾಖಲೆ ಸಲ್ಲಿಸದೇ ರಾಧಿಕಾ ಅವರು ಕುಮಾರಸ್ವಾಮಿ ಅವರ ಎರಡನೇ ಪತ್ನಿ ಎಂದು ದೂರುದಾರರು ಹೇಳುವುದನ್ನು ಆಧರಿಸಿ ಈ ಹಂತದಲ್ಲಿ ನ್ಯಾಯಾಲಯವು ಕುಮಾರಸ್ವಾಮಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಲಾಗದು. ಮುಂದುವರಿದು, ಮೊದಲ ಪತ್ನಿ ಜೀವಂತವಾಗಿರಬೇಕಾದರೆ ಹಾಲಿ ಕಾನೂನಿನಲ್ಲಿ ಎರಡನೇ ಪತ್ನಿ ಪರಿಕಲ್ಪನೆಗೆ ಅವಕಾಶವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಕುಮಾರಸ್ವಾಮಿ ಅವರು ರಾಧಿಕಾ, ನಿಖಿಲ್‌ ಮತ್ತು ಶರ್ಮಿಕಾ ಅವರ ಬಗ್ಗೆ ಮಾಹಿತಿ ಬಚ್ಚಿಟ್ಟಿದ್ದಾರೆ ಎಂಬುದು ದೂರುದಾರರ ವಾದವಾಗಿದೆ. ಆದರೆ, ದೂರುದಾರರು ಅನಿತಾ ಅವರು ಕುಮಾರಸ್ವಾಮಿ ಅವರ ಪತ್ನಿ ಎಂಬುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಕುಮಾರಸ್ವಾಮಿ ಅವರು ಉಮೇದುವಾರಿಕೆ ಅಂದರೆ ಫಾರ್ಮ್‌ 26ರಲ್ಲಿ ಪತ್ನಿ ಕಾಲಂನಲ್ಲಿ ಅನಿತಾ ಅವರನ್ನು ಪತ್ನಿ ಎಂದು ಹೇಳಿದ್ದಾರೆ. ಆದರೆ, ರಾಧಿಕಾ ಅವರು ಕುಮಾರಸ್ವಾಮಿ ಅವರ ಪತ್ನಿ ಅಥವಾ ಎರಡನೇ ಪತ್ನಿ ಎಂದು ತೋರಿಸಲು ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

“ಕುಮಾರಸ್ವಾಮಿ ಅವರು ತಮ್ಮ ಅಫಿಡವಿಟ್‌ನಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ. ದೂರಿನ ಪ್ರಕಾರ ನೋಡಿದರೆ ಕುಮಾರಸ್ವಾಮಿ ಅವರು ಪತ್ನಿ ರಾಧಿಕಾ ಮತ್ತು ಮಕ್ಕಳ ಮಾಹಿತಿ ನೀಡಿಲ್ಲ. ತಪ್ಪು ಹೇಳಿ ಅಥವಾ ಮಾಹಿತಿ ಬಹಿರಂಗಪಡಿಸದಿರುವುದು ಬೇರೆಬೇರೆ ವಿಚಾರಗಳಾಗಿವೆ. ಹೀಗಾಗಿ, ಕುಮಾರಸ್ವಾಮಿ ಅವರು ಐಪಿಸಿ ಸೆಕ್ಷನ್‌ 181ರ ಅಡಿ ಯಾವುದೇ ಅಪರಾಧ ಎಸಗಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

ಮುಂದುವರಿದು, “ಫಾರ್ಮ್‌ 26ರಲ್ಲಿ ಅಭ್ಯರ್ಥಿಯ ಮಕ್ಕಳ ಕುರಿತಾದ ಮಾಹಿತಿಗೆ ಸಂಬಂಧಿಸಿದ ಅಂಶ ಇಲ್ಲ. ಪತ್ನಿ, ಆಕೆಯ ಆಸ್ತಿ ಮತ್ತು ಇತರ ಅಂಶಗಳನ್ನು ಹೊರತುಪಡಿಸಿ ಮಕ್ಕಳ ಮಾಹಿತಿ ಕೋರಲಾಗಿಲ್ಲ. ಫಾರ್ಮ್‌ 26ರಲ್ಲಿ ಏನು ಮಾಹಿತಿ ಕೋರಲಾಗಿದೆಯೋ ಆ ಮಾಹಿತಿಯನ್ನಷ್ಟೇ ಅಭ್ಯರ್ಥಿ ನೀಡಬೇಕು. ಕುಮಾರಸ್ವಾಮಿ ಅವರು 2018ರ ಏಪ್ರಿಲ್‌ 19ರಂದು ಫಾರ್ಮ್‌ 26 ಅನ್ನು ಸಲ್ಲಿಸಿದ್ದು, ಇದನ್ನೇ ದೂರುದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಇದರ ಪ್ರಕಾರ ಆರೋಪಿ ಕುಮಾರಸ್ವಾಮಿ ಅವರು ಮಗ/ಮಗಳು/ಮಕ್ಕಳ ಬಗ್ಗೆ ಮಾಹಿತಿ ನೀಡಬೇಕಿಲ್ಲ. ಹೀಗಾಗಿ, ಇದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125ಎ ಅಡಿ ಅಪರಾಧವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2018ರ ಮೇನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಉಮೇದುವಾರಿಕೆ ಮತ್ತು ಅಫಿಡವಿಟ್‌ ದೋಷಪೂರಿತವಾಗಿವೆ. ಇದರಲ್ಲಿ ಕುಮಾರಸ್ವಾಮಿ ಅವರು ಎರಡನೇ ಪತ್ನಿ ರಾಧಿಕಾ, ಪುತ್ರ ನಿಖಿಲ್‌ ಮತ್ತು ಪುತ್ರಿ ಶರ್ಮಿಕಾ ಅವರ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ. ಹೀಗಾಗಿ, ಅವರ ವಿರುದ್ಧ ಐಪಿಸಿ ಸೆಕ್ಷನ್‌ 181 ಮತ್ತು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 125ಎ ಅಡಿ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದರು.

S Ananda Vs H D Kumaraswamy.pdf
Preview