ಸುಪ್ರೀಂ ಕೋರ್ಟ್ ಮತ್ತು ಇಡಿ 
ಸುದ್ದಿಗಳು

ಆರೋಪಿಗೆ 24 ಗಂಟೆಯೊಳಗೆ ಬಂಧನದ ಕಾರಣ ವಿವರಿಸಿದರೆ ಪಿಎಂಎಲ್ಎ ಸೆಕ್ಷನ್ 19ರ ಸೂಕ್ತ ಪಾಲನೆ: ಸುಪ್ರೀಂ ಕೋರ್ಟ್

ಬಂಧಿತ ವ್ಯಕ್ತಿಗೆ ಬಂಧನದ ಕಾರಣಗಳ ಬಗ್ಗೆ ತಿಳಿಸಲು ಸಮಂಜಸವಾದ ಅನುಕೂಲಕರ ಸಮಯ ಅಥವಾ ಸಮಂಜಸವಾದ ಅಗತ್ಯ ಸಮಯ ಎಂಬುದು ಬಂಧನದ ಇಪ್ಪತ್ತನಾಲ್ಕು ಗಂಟೆಯೊಳಗೆ ಆಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿತನಾದ ವ್ಯಕ್ತಿಗೆ ಆತನನ್ನು ಬಂಧಿಸಿದ ಕಾರಣಗಳ ಬಗ್ಗೆ 24 ಗಂಟೆಗಳ ಒಳಗೆ ಲಿಖಿತವಾಗಿ ತಿಳಿಸಿದರೆ ಅದು ಕಾಯಿದೆಯ ಸೆಕ್ಷನ್ 19 ಸಂವಿಧಾನದ 22 (1)ನೇ ವಿಧಿಗೆ ಅನುಗುಣವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಪಿಎಂಎಲ್ಎ ಕಾಯಿದೆಯ ಸೆಕ್ಷನ್ 19ರ ಪ್ರಕಾರ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿಯಲ್ಲಿ ಬಂಧಿಸಿದ ವೇಳೆ ಅಧಿಕಾರಿಗಳು ಆಂತರಿಕವಾಗಿ ರೂಪಿಸಲಾದ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಗಮನಾರ್ಹವಾಗಿ, ಅಂತಹ ಅಧಿಕಾರಿಗಳು ಬಂಧಿತ ವ್ಯಕ್ತಿಗೆ ಆತನ ಬಂಧನದ ಕಾರಣಗಳನ್ನು ʼಸಾಧ್ಯವಾದಷ್ಟು ಬೇಗʼ ತಿಳಿಸಬೇಕು ಎಂದು ಈ ನಿಯಮಾವಳಿ ಹೇಳುತ್ತದೆ.

ಅಲ್ಲದೆ, ಬಂಧನಕ್ಕೊಳಗಾದ ವ್ಯಕ್ತಿಯನ್ನು ಆತನಿಗೆ ಬಂಧನದ ಕಾರಣಗಳನ್ನು ತಿಳಿಸದೆ ಬಂಧಿಸುವಂತಿಲ್ಲ ಎಂದು ಸಂವಿಧಾನದ ವಿಧಿ 22 (1) ವಿವರಿಸುತ್ತದೆ.

ಪಿಎಂಎಲ್ಎಯ ಸೆಕ್ಷನ್ 19ರಲ್ಲಿ "ಸಾಧ್ಯವಾದಷ್ಟು ಬೇಗ" ಎಂದು ಹೇಳಿರುವುದನ್ನು "ಆದಷ್ಟೂ ಬೇಗ" ಅಥವಾ "ಸಮಂಜಸವಾದ ಅನುಕೂಲಕರ ಅವಧಿಯೊಳಗೆ" ಎಂದು ಅರ್ಥೈಸಬಹುದು ಎಂಬುದಾಗಿ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ಬಂಧಿತ ವ್ಯಕ್ತಿಗೆ ಬಂಧನದ ಕಾರಣಗಳ ಬಗ್ಗೆ ತಿಳಿಸಲು ಸಮಂಜಸವಾದ ಅನುಕೂಲಕರ ಸಮಯ ಅಥವಾ ಸಮಂಜಸವಾದ ಅಗತ್ಯ ಸಮಯ ಎಂಬುದು ಬಂಧನದ ಇಪ್ಪತ್ತನಾಲ್ಕು ಗಂಟೆಯೊಳಗೆ ಎಂಬುದಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ, ಇ ಡಿಯಿಂದ ಬಂಧಿತನಾಗಿದ್ದ ಮೇಲ್ಮನವಿದಾರನನ್ನು ಬಂಧಿಸಿದಾಗ ಆತನ ಬಂಧನದ ಕಾರಣಗಳನ್ನು ಒಳಗೊಂಡ ದಾಖಲೆ ಹಸ್ತಾಂತರಿಸಲಾಗಿತ್ತು. "ನನಗೆ ಮಾಹಿತಿ ನೀಡಲಾಗಿದ್ದು ಮೇಲೆ ತಿಳಿಸಿದ ಬಂಧನದ ಕಾರಣಗಳನ್ನು ಓದಿದ್ದೇನೆ" ಎಂಬ ಹೇಳಿಕೆಯಡಿ ಮೇಲ್ಮನವಿದಾರ ಸಹಿ ಹಾಕಿದ್ದರು.

ಬಂಧನದ ಕಾರಣ ಇರುವ ದಾಖಲೆಯನ್ನು ಬಂಧಿತನಿಗೆ ಹಸ್ತಾಂತರಿಸಿ ಆತನ ಅನುಮೋದನೆ ಮತ್ತು ಸಹಿ ಪಡೆದು ಅದನ್ನು ಹಿಂಪಡೆಯುವ ಇ ಡಿ, ಬಂಧನಕ್ಕೊಳಗಾದವರಿಗೆ ಬಂಧನದ ಸಮಯದಲ್ಲಿ ಅದರ ಪ್ರತಿ ಒದಗಿಸದೆ, ಬಂಧನವನ್ನು ಕಾನೂನುಬಾಹಿರಗೊಳಿಸುತ್ತದೆಯೇ ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು.

ಬಂಧಿತ ವ್ಯಕ್ತಿಗೆ ಬಂಧನದ ಸಮಯದಲ್ಲಿ ಬಂಧನದ ಕಾರಣಗಳ ಬಗ್ಗೆ ಮೌಖಿಕವಾಗಿ ಮಾಹಿತಿ ನೀಡಿದರೆ ಅಥವಾ ಅರಿವು ಮೂಡಿಸಿದರೆ ಸಾಕು ಮತ್ತು ಬಂಧನದ 24 ಗಂಟೆಗಳ ಒಳಗೆ ಬಂಧನದ ಕಾರಣಗಳ ಬಗ್ಗೆ ಲಿಖಿತ ಸಂವಹನವನ್ನು ಒದಗಿಸಿದರೆ ಸಾಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತಾನು ನೀಡಿರುವ ಈ ಆದೇಶ ವಿಜಯ್ ಮದನ್‌ಲಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ನೀಡಿದ ತೀರ್ಪಿಗೆ ಅನುಗುಣವಾಗಿದೆ. ಬಂಧನದ ಆಧಾರದ ಬಗ್ಗೆ ಬಂಧಿಸಲ್ಪಟ್ಟ ವ್ಯಕ್ತಿಗೆ ತಿಳಿಸಿದರೆ ಅದು ಪಿಎಂಎಲ್ಎಯ ಸೆಕ್ಷನ್ 19 ಮತ್ತು ಸಂವಿಧಾನದ 22 (1) ನೇ ವಿಧಿಯ ಸೂಕ್ತ ಪಾಲನೆಯಾಗುತ್ತದೆ ಎಂದು ನ್ಯಾಯಾಲಯ ನುಡಿದಿದೆ.

ಬಂಧಿತ ಮೇಲ್ಮನವಿದಾರನನ್ನು ಏಕೆ ಬಂಧಿಸಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ತಿಳಿಸಲಾಗಿದೆ ಎಂದು ತರ್ಕಿಸಿದ ನ್ಯಾಯಾಲಯವು ಮೇಲ್ಮನವಿ ವಜಾಗೊಳಿಸಿತು

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

RK Arora vs ED.pdf
Preview