ಐಪಿಸಿ ಸೆಕ್ಷನ್ 304ಬಿಯನ್ನು ರಚಿಸಿರುವ ಶಾಸಕಾಂಗದ ಉದ್ದೇಶ ವರದಕ್ಷಿಣೆ ಸಾವಿನ ಪಿಡುಗನ್ನು ತಡೆಯುವುದಾಗಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಅಜೋಳಾ ದೇವಿ ಮತ್ತಿತರರು ಹಾಗೂ ಜಾರ್ಖಂಡ್ ಸರ್ಕಾರದ ನಡುವಣ ಪ್ರಕರಣ].
ವರದಕ್ಷಿಣೆ ಸಾವಿಗೆ ಕಾರಣರಾಗುವ ವ್ಯಕ್ತಿಗಳಿಗೆ ಕಠೋರ ಶಿಕ್ಷೆ ಕಾದಿದೆ ಎಂಬ ಸಂದೇಶ ರವಾನೆಯಾಗಬೇಕು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
“ಸೆಕ್ಷನ್ 304 ಬಿ ಅಡಿಯ ವರದಕ್ಷಿಣೆ ಸಾವಿನ ಅಪರಾಧವು ಸಮಾಜದ ವಿರುದ್ಧದ ಅಪರಾಧವಾಗಿದೆ. ವರದಕ್ಷಿಣೆ ಸಾವಿಗೆ ಕಾರಣರಾಗುವ ಅಥವಾ ವರದಕ್ಷಿಣೆ ನಿಷೇಧ ಕಾಯಿದೆಯಡಿ ಕೃತ್ಯ ಎಸಗುವ ವ್ಯಕ್ತಿಗೆ ಕಠೋರ ಶಿಕ್ಷೆ ಕಾದಿದೆ ಎಂಬ ಬಲವಾದ ಸಂದೇಶ ಸಮಾಜಕ್ಕೆ ರವಾನೆಯಾಗಬೇಕು” ಎಂದು ನ್ಯಾಯಾಲಯ ಹೇಳಿದೆ.
ಹಾಗಾಗಿ ಮೃತ ಮಹಿಳೆಯ ಮಾವ ಮತ್ತು ಅತ್ತೆಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವ ಜಾರ್ಖಂಡ್ ಹೈಕೋರ್ಟ್ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
ವರದಕ್ಷಿಣೆ ಸಾವಿನ ಅಪರಾಧವು ಸಮಾಜದ ವಿರುದ್ಧದ ಅಪರಾಧವಾಗಿದೆ.ಸರ್ವೋಚ್ಚ ನ್ಯಾಯಾಲಯ
ತಮ್ಮ ವಯಸ್ಸನ್ನು ಗಮನಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕು ಎಂದು ಪ್ರಕರಣದಲ್ಲಿನ ಆರೋಪಿಗಳಾದ ಅತ್ತೆ ಮತ್ತು ಮಾವ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಆದರೆ ಮದುವೆಯಾದ ಒಂದು ವರ್ಷದೊಳಗೆ ಆರೋಪಿಗಳ ಸೊಸೆ ಸಾವನ್ನಪ್ಪಿದ್ದಾಳೆ. ವರದಕ್ಷಿಣೆ ಬೇಡಿಕೆ ಇಟ್ಟಿರುವುದು ಪ್ರಾಸಿಕ್ಯೂಷನ್‌ನಿಂದ ಸಾಬೀತಾಗಿದೆ. ತಮ್ಮ ಸೊಸೆ ಅತಿಸಾರದಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಗಳು ಸುಳ್ಳು ವಾದ ಮುಂದಿಟ್ಟಿದ್ದು ಇದು ರುಜುವಾತಾಗಿಲ್ಲ. ವರದಕ್ಷಿಣೆ ಸಾವಿನ ಅಪರಾಧಕ್ಕೆ ಕನಿಷ್ಠ 7 ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆ ಜೀವಾವಧಿ ವಿಧಿಸಬಹುದಾಗಿದೆ. ವಿಚಾರಣಾ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ, ”ಎಂದು ನ್ಯಾಯಾಲಯ ಹೇಳಿದೆ.
ವರದಕ್ಷಿಣೆ ಸಾವಿನ ಪಿಡುಗನ್ನು ಕಠಿಣ ಕ್ರಮಗಳಿಂದ ಹತ್ತಿಕ್ಕುವುದು ಸೆಕ್ಷನ್ 304 ಬಿಯನ್ನು ರಚನೆಯ ಹಿಂದಿನ ಶಾಸಕಾಂಗದ ಉದ್ದೇಶವಾಗಿದೆ ಎಂದು ಅದು ಅಭಿಪ್ರಾಯಪಟ್ಟಿತು. "ಸೆಕ್ಷನ್ 304 ಬಿ ಅಡಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸುವಾಗ, ಶಾಸಕಾಂಗ ಕಾನೂನು ರೂಪಿಸಿರುವ ಹಿಂದಿನ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನ ಅಪರಾಧವು ಸಮಾಜದ ವಿರುದ್ಧದ ಅಪರಾಧವಾಗಿದೆ. ಅಂತಹ ಅಪರಾಧಗಳು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಗಮನಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದು ಅಸಮಂಜಸ ಎನ್ನಲಾಗದು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿತು.