Jharkhand High Court, Mental health 
ಸುದ್ದಿಗಳು

ಮಾನಸಿಕ ಆರೋಗ್ಯ ಚಿಕಿತ್ಸೆಗೂ ವಿಮಾ ಸೌಲಭ್ಯ ಅನ್ವಯ: ಜಾರ್ಖಂಡ್ ಹೈಕೋರ್ಟ್

ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಸಿಗುವಷ್ಟೇ ಸೌಲಭ್ಯಗಳು ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ರೋಗಿಗೂ ದೊರೆಯಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ವ್ಯಕ್ತಿಯ ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ವೆಚ್ಚವಾದ ಹಣದ ಮರುಪಾವತಿಗೆ ನಿರಾಕರಿಸುವಂತಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಸಂತೋಷ್ ಕುಮಾರ್ ವರ್ಮಾ ಮತ್ತು ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಅಂತೆಯೇ ಕೋಲ್ ಇಂಡಿಯಾ ಲಿಮಿಟೆಡ್‌ ಕಂಪನಿಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಮ್ಮ ಪತ್ನಿಯ ಮನೋವೈದ್ಯಕೀಯ ಚಿಕಿತ್ಸೆಗೆ ಖರ್ಚು ಮಾಡಿದ ಮೊತ್ತವನ್ನು ಕಂಪೆನಿ ಮರುಪಾವತಿಸಬೇಕು ಎಂದು ನ್ಯಾಯಮೂರ್ತಿ ಆನಂದ ಸೇನ್ ನಿರ್ದೇಶಿಸಿದರು.

ಮಾನಸಿಕ ಆರೋಗ್ಯ ಕಾಯ್ದೆ 2017ರ ನಿಬಂಧನೆಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿ ಮತ್ತು ಉಳಿದ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಯ ನಡುವೆ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

" ಒಂದು ಸಾಲಿನಲ್ಲಿ ಹೇಳುವುದಾದರೆ, ಮಾನಸಿಕ ಅಸ್ವಸ್ಥ ವ್ಯಕ್ತಿ ಅಥವಾ ದೈಹಿಕವಾಗಿ ಅಸ್ವಸ್ಥ ವ್ಯಕ್ತಿಯ ನಡುವೆ ಚಿಕಿತ್ಸೆ ಮತ್ತು ಇತರ ಸೌಲಭ್ಯಗಳನ್ನು ನೀಡುವಲ್ಲಿ ಯಾವುದೇ ವ್ಯತ್ಯಾಸ ಇರುವಂತಿಲ್ಲ ಎಂದು ಸಂಕ್ಷಿಪ್ತವಾಗಿ ಹೇಳಬಹುದು. ಚಿಕಿತ್ಸೆಯ ವಿಷಯದಲ್ಲಿ ಇಬ್ಬರನ್ನೂ ಯಾವುದೇ ತಾರತಮ್ಯವಿಲ್ಲದೆ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಕು" ಎಂದು ಅದು ಹೇಳಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿಯೊಂದು ವಿಮಾ ಕಂಪೆನಿ ದೈಹಿಕ ಅನಾರೋಗ್ಯದಂತೆಯೇ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ವೈದ್ಯಕೀಯ ವಿಮೆಯನ್ನು ಒದಗಿಸಬೇಕು ಎಂದುತಿಳಿಸುವ  ಕಾಯಿದೆಯ ಸೆಕ್ಷನ್ 21(4) ಅನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.

" ಮೇಲೆ ತಿಳಿಸಿದ ಶಾಸನಬದ್ಧ ಆದೇಶವು ಎಲ್ಲಾ ಆರೋಗ್ಯ ವಿಮಾದಾರರು ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ರೀತಿಯಲ್ಲಿಯೇ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಬೇಕೆಂದು ಆದೇಶಿಸುತ್ತದೆ. ಇದು ಸಮಾನತೆಯ ಷರತ್ತು ಕೂಡ ಆಗಿದ್ದು, ಇದು ವೈದ್ಯಕೀಯ ವಿಮೆ ಅಥವಾ ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಯ ವೆಚ್ಚದ ಮರುಪಾವತಿಗೆ ಬಂದಾಗ ತಾರತಮ್ಯ ನಿವಾರಿಸಬೇಕು ಎಂದು ಹೇಳುತ್ತದೆ. ಶಾಸನಬದ್ಧ ನಿಬಂಧನೆಯ ಕಾರಣದಿಂದಾಗಿ, ಯಾವುದೇ ಆರೋಗ್ಯ ವಿಮಾ ಪಾಲಿಸಿಯಲ್ಲಿ ಮಾನಸಿಕ ಅಸ್ವಸ್ಥತೆ ಅಥವಾ ಮನೋವೈದ್ಯಕೀಯ ಚಿಕಿತ್ಸೆಗೆ ಮಾಡಿದ ವೆಚ್ಚಗಳ ಮರುಪಾವತಿಯನ್ನು ಹೊರಗಿಡಲು ಯಾವುದೇ ಷರತ್ತು ಇರಬಾರದು " ಎಂದು ಅದು ಹೇಳಿದೆ.