Jail
Jail 
ಸುದ್ದಿಗಳು

ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ: ಜೀವಾವಧಿ ಶಿಕ್ಷೆಗೆ ಒಳಗಾದವರಿಗೆ ವಿನಾಯಿತಿ ನೀಡಬಹುದೇ? ಸುಪ್ರೀಂ ಪ್ರಶ್ನೆ

Bar & Bench

ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ವಿನಾಯಿತಿ ನೀಡುವುದನ್ನು ನಿರ್ಬಂಧಿಸುವ ಐಪಿಸಿ ಸೆಕ್ಷನ್ 376ಡಿಬಿಯನ್ನು ವಿನಾಯಿತಿಗೆ ಅವಕಾಶ ನೀಡುವಂತೆ ವ್ಯಾಖ್ಯಾನಿಸಬಹುದೇ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ  [ನಿಖಿಲ್ ಶಿವಾಜಿ ಗೋಲೈತ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರಸ್ತುತ ಈ ಸೆಕ್ಷನ್‌ 12ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದವರಿಗೆ ಜೀವನ ಪರ್ಯಂತ ಸೆರೆವಾಸ ವಿಧಿಸುವ ಜೀವಾವಧಿ ಶಿಕ್ಷೆಯನ್ನೇ ಕನಿಷ್ಠ ಶಿಕ್ಷೆ ಎನ್ನುತ್ತದೆ.

ಕಾನೂನು ಉಲ್ಲಂಘಿಸಿ ಸಾಂವಿಧಾನಿಕ ನ್ಯಾಯಾಲಯ ಇಂತಹ ಅಪರಾಧಿಗಳಿಗೆ ವಿನಾಯಿತಿ ನೀಡಿದರೆ ಅದು ಕಾಯಿದೆಯ ಮೇಲೆಯೇ ಕ್ರೌರ್ಯ ಎಸಗಿದಂತೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಹೇಳಿದೆ.

"ಸಾಂವಿಧಾನಿಕ ನ್ಯಾಯಾಲಯ ಅಪರಾಧಿಗೆ ಆಜೀವ ಶಿಕ್ಷೆ ವಿಧಿಸಿದ್ದರೂ ಜೀವಾವಧಿ ಶಿಕ್ಷೆಯನ್ನು ನಿರ್ದಿಷ್ಟ ವರ್ಷಗಳವರೆಗೆ ಮಾತ್ರ ಎಂದು ಹೇಳಿ ನಿರ್ದಿಷ್ಟ ಸೆಕ್ಷನ್‌ ಅನ್ನು ವ್ಯಾಖ್ಯಾನಿಸಲು ಸಾಧ್ಯವೇ? ನಾವು ಆ ಶಾಸನದ ಮೇಲೆ ಕ್ರೌರ್ಯ ಎಸಗಲು ಸಾಧ್ಯವೇ?" ಎಂದು ನ್ಯಾ. ಓಕಾ ಪ್ರಶ್ನಿಸಿದರು.

ಅಪರಾಧಿಯ ಉಳಿದ ಜೀವಿತಾವಧಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಕನಿಷ್ಠ ಶಿಕ್ಷೆಯೆಂದು ಸೂಚಿಸುವ ಐಪಿಸಿ ಸೆಕ್ಷನ್ 376ಡಿಬಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ‌ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಪ್ರಶ್ನೆ ಕೇಳಿದೆ. ಅರ್ಜಿದಾರ ವಿನಾಯಿತಿ ದೊರೆಯದೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯಾಗಿದ್ದಾನೆ.

ವಿಶ್ವದ ಗಮನ ಸೆಳೆದಿದ್ದ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಜಾರಿಗೆ ತಂದ ಈ ಸೆಕ್ಷನ್‌, ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದ್ದು ವ್ಯಕ್ತಿ ತನ್ನನ್ನು ತಿದ್ದಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ಕಸಿದುಕೊಳ್ಳುತ್ತದೆ ಎಂದು ಅರ್ಜಿದಾರ ದೂರಿದ್ದ.

ಅರ್ಜಿದಾರನ ವಾದದ ಜೊತೆಗೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ವಾದಗಳನ್ನು ಆಲಿಸಿದ ನ್ಯಾಯಾಲಯ ಪ್ರಕರಣವನ್ನು ಸುದೀರ್ಘವಾಗಿ ಆಲಿಸಬೇಕಾಗುತ್ತದೆ ಎಂದು ತಿಳಿಸಿ ಪ್ರಕರಣವನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.