In-laws harassing a wife
In-laws harassing a wife 
ಸುದ್ದಿಗಳು

ಪತ್ನಿಗೆ ಕಿರುಕುಳ: ದೂರದ ಸ್ಥಳದಲ್ಲಿ ವಾಸಿಸುವ ಸಂಬಂಧಿಗಳ ವಿರುದ್ಧವೂ ಪ್ರಕರಣ ದಾಖಲಿಸಬಹುದು ಎಂದ ಬಾಂಬೆ ಹೈಕೋರ್ಟ್

Bar & Bench

ಅನೇಕ ಬಾರಿ ದೂರದ ಸ್ಥಳಗಳಲ್ಲಿ ವಾಸಿಸುವ ಸಂಬಂಧಿಕರು ಕೂಡ ದಂಪತಿಗಳ ಜಗಳಕ್ಕೆ ಕಾರಣವಾಗುತ್ತಾರೆ, ಹೆಂಡತಿಯನ್ನು ಶೋಷಿಸುತ್ತಾರೆ ಎಂದು ಇತ್ತೀಚೆಗೆ ಹೇಳಿರುವ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ, ಐಪಿಸಿ ಸೆಕ್ಷನ್ 498 ಎ ಅಡಿ ವ್ಯಕ್ತಿಯೊಬ್ಬನ ಸಂಬಂಧಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿತು. [ರಾಜೇಶ್ ಹಿಮ್ಮತ್ ಪುಂಡ್ಕರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಪತಿ, ಆತನ ಪೋಷಕರು ಹಾಗೂ ಒಡಹುಟ್ಟಿದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಸುನೀಲ್ ಶುಕ್ರೆ ಮತ್ತು ಗೋವಿಂದ್ ಸನಪ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

ಪತಿ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದರೆ, ಪೋಷಕರು ಮತ್ತು ವಿವಾಹಿತ ಸಹೋದರಿ ಅಮರಾವತಿ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಪತಿಯ ಕಿರಿಯ ಸಹೋದರ ಪುಣೆ ನಗರದಲ್ಲಿದ್ದಾನೆ ಎಂದು ತಿಳಿಸಿದ್ದ ಆರೋಪಿಗಳು ತಾವ್ಯಾರೂ ಅರ್ಜಿದಾರ ಪತಿಯೊಂದಿಗೆ ವಾಸಿಸುತ್ತಿಲ್ಲ. ಆದ್ದರಿಂದ, ಅತ್ತೆ ಅಥವಾ ಗಂಡನ ಸಂಬಂಧಿಕರು ಎಂದು ಕರೆಯಲಾಗುವ ತಮ್ಮ ವಿರುದ್ಧ ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂದು ವಾದಿಸಿದ್ದರು.

ಎರಡು ಅಂಶಗಳನ್ನು ಆಧರಿಸಿ ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿತು: ಮೊದಲನೆಯದಾಗಿ ಸಾಬೀತುಪಡಿಸದ ವಿನಾ ದೂರದ ಸ್ಥಳದಲ್ಲಿ ವಾಸಿಸುವ ಸಂಬಂಧಿ ಸದಾ ನಿರಪರಾಧಿಯಾಗಿರುತ್ತಾನೆ ಎಂಬ ಯಾವುದೇ ಊಹೆ ಕಾನೂನಿನಲ್ಲಿ ಇಲ್ಲ. ದೂರದಲ್ಲಿರುವ ಸಂಬಂಧಿ ಕೂಡ ಅದೇ ರೀತಿಯ ಶೋಷಣೆ ಮಾಡಿದ ಅನೇಕ ಪ್ರಕರಣಗಳಿವೆ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದ್ದು ಇನ್ನೂ ಹೆಚ್ಚಿನ ವಿವರಗಳು ಮುಂದಿನ ತನಿಖೆಯಿಂದ ಬೆಳಕಿಗೆ ಬರಲಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅನೈತಿಕ ಸಂಬಂಧ ಹೊಂದಿದ್ದನ್ನು ಹೆಂಡತಿ ಪ್ರಶ್ನಿಸಿದ್ದಾಗ ಗಂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಘಟನೆಯನ್ನು ಪತಿಯ ಕಡೆಯವರಿಗೆ ತಿಳಿಸಿದಾಗ ಅವರು ಆತನ ನಡೆಯನ್ನು ತಿದ್ದುವ ಬದಲು ಪತ್ನಿಯನ್ನೇ ನಿಂದಿಸಲಾರಂಭಿಸಿದ್ದರು. ಅಲ್ಲದೇ ₹50,000 ವರದಕ್ಷಿಣೆ ಹಣ ನೀಡುವಂತೆಯೂ ಒತ್ತಾಯಿಸಿದ್ದರು ಎನ್ನಲಾಗಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Rajesh_Himmat_Pundkar_vs_State_of_Maharashtra.pdf
Preview