ಶರ್ಜೀಲ್ ಇಮಾಮ್ ಮತ್ತು ದೆಹಲಿ ಹೈಕೋರ್ಟ್ 
ಸುದ್ದಿಗಳು

ದೇಶದ್ರೋಹ ಪ್ರಕರಣ: ಶಾರ್ಜೀಲ್‌ಗೆ ಜಾಮೀನು ನೀಡುವ ಬಗ್ಗೆ ಫೆ. 17ರೊಳಗೆ ನಿರ್ಧರಿಸುವಂತೆ ಸೂಚಿಸಿದ ದೆಹಲಿ ಹೈಕೋರ್ಟ್

ಸಿಎಎ ಮತ್ತು ಎನ್ಆರ್‌ಸಿ ವಿರುದ್ಧ ಅಲಿಗಢ ಮುಸ್ಲಿಂ ವಿವಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್‌ ವ್ಯಾಪ್ತಿಯಲ್ಲಿ ಮಾಡಿದ ಭಾಷಣಗಳಿಗಾಗಿ ಇಮಾಮ್ ವಿರುದ್ಧ ಪ್ರಕರಣ ದಾಖಲಾಗಿದ್ದು, 2020ರ ಜನವರಿಯಿಂದ ಅವರು ಜೈಲಿನಲ್ಲಿದ್ದಾರೆ.

Bar & Bench

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರ ಶಾರ್ಜೀಲ್ ಇಮಾಮ್ ಸಲ್ಲಿಸಿದ್ದ ಶಾಸನಬದ್ಧ ಜಾಮೀನು ಅರ್ಜಿಯನ್ನು ಫೆಬ್ರವರಿ 17ರೊಳಗೆ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ಪೀಠ ಇಮಾಮ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

ಗರಿಷ್ಠ ಏಳು ವರ್ಷಗಳ ಶಿಕ್ಷೆಯಲ್ಲಿ ಈಗಾಗಲೇ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದು ಶಾಸನಬದ್ಧ ಜಾಮೀನಿಗೆ ತಾನು ಅರ್ಹ ಎಂಬುದು ಇಮಾಮ್ ವಾದ.

ಒಂದು ವೇಳೆ ಕೆಳ ನ್ಯಾಯಾಲಯದಲ್ಲಿ ಇಮಾಮ್ ಅವರಿಗೆ ಜಾಮೀನು ನಿರಾಕರಣೆಯಾದರೆ, ಆಗ ಅವರು ಹೈಕೋರ್ಟ್‌ನಲ್ಲಿ ಹೊಸದಾಗಿ ಮೇಲ್ಮನವಿ ಸಲ್ಲಿಸಬಹುದು ಎಂದು ಪೀಠ ಹೇಳಿದೆ.

ಸಿಎಎ ಮತ್ತು ಎನ್ಆರ್‌ಸಿ ವಿರುದ್ಧ ಅಲಿಗಢ ಮುಸ್ಲಿಂ ವಿವಿ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್‌ ವ್ಯಾಪ್ತಿಯಲ್ಲಿ ಮಾಡಿದ ಭಾಷಣಗಳಿಗಾಗಿ ಇಮಾಮ್ ವಿರುದ್ಧ ಪ್ರಕರಣ ದಾಖಲಾಗಿದ್ದು, 2020ರ ಜನವರಿಯಿಂದ ಅವರು ಜೈಲಿನಲ್ಲಿದ್ದಾರೆ.

ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಇಮಾಮ್‌ ಅವರು ಸಲ್ಲಿಸಿದ್ದ ಮನವಿಯನ್ನು ಜುಲೈ 2022 ರಲ್ಲಿ, ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ಇದೇ ಪ್ರಕರಣದಲ್ಲಿ ತನ್ನ ವಿರುದ್ಧ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) ಆರೋಪ ನಿಗದಿಪಡಿಸಿದ ಆದೇಶ ಪ್ರಶ್ನಿಸಿ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಮಾರ್ಚ್ 8ರಂದು ವಿಚಾರಣೆ ನಡೆಸಲಿದೆ.