Sedition, Supreme Court 
ಸುದ್ದಿಗಳು

[ದೇಶದ್ರೋಹ] ಸುಪ್ರೀಂನಲ್ಲಿ ಐಪಿಸಿ ಸೆಕ್ಷನ್‌ 124ಎ ಪ್ರಶ್ನೆ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಕೇಂದ್ರ

ಏಪ್ರಿಲ್‌ 27ರಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠವು ಏಪ್ರಿಲ್‌ 30ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು.

Bar & Bench

ರಾಷ್ಟ್ರದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ ಪ್ರಶ್ನಿಸಿರುವ ಮನವಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿದೆ. ಆಕ್ಷೇಪಣೆಯ ಕರಡು ಸಿದ್ಧವಾಗಿದ್ದು, ಸಕ್ಷಮ ಪ್ರಾಧಿಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಏಪ್ರಿಲ್‌ 30ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿತ್ತು. ಅಲ್ಲದೇ, ಮೇ 5ರಂದು ಅಂತಿಮ ವಿಚಾರಣೆ ನಡೆಸುವುದಾಗಿ ಹೇಳುವ ಮೂಲಕ ಪ್ರಕರಣ ಮುಂದೂಡಲಾಗುವುದಿಲ್ಲ ಎಂಬುದನ್ನು ಏಪ್ರಿಲ್‌ 27ರಂದು ಪೀಠವು ಸ್ಪಷ್ಟಪಡಿಸಿತ್ತು.

ಸಾಮಾಜಿಕ ಜಾಲತಾಣದಲ್ಲಿ ಕಿಶೋರ್‌ಚಂದ್ರ ವಾಂಗ್‌ಖೇಮ್ಚ ಮತ್ತು ಕನ್ಹಯ್ಯ ಲಾಲ್‌ ಶುಕ್ಲಾ ಎಂಬ ಇಬ್ಬರು ಪತ್ರಕರ್ತರು ಕಾರ್ಟೂನ್‌ ಮತ್ತು ಪೋಸ್ಟ್‌ ಹಂಚಿಕೊಂಡಿದ್ದಕ್ಕೆ ಅವರ ವಿರುದ್ಧ ಕಳೆದ ವರ್ಷದ ಏಪ್ರಿಲ್‌ನಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಅವರು ಸೆಕ್ಷನ್‌ 124ಎ ಪ್ರಶ್ನಿಸಿದ್ದಾರೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷದ ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಸ್ವಾತಂತ್ರ್ಯ ಬಂದ 75 ವರ್ಷಗಳಾದರೂ ಈ ಕಾನೂನು ಅಗತ್ಯವಿದೆಯೇ ಎಂದು ಪ್ರಶ್ನಿಸಿತ್ತು.

“ಇದೊಂದು ವಸಹಾತುಶಾಹಿ ಕಾಲದ ಕಾನೂನಾಗಿದ್ದು, ಬ್ರಿಟಿಷರು ಇದನ್ನು ಮಹಾತ್ಮ ಗಾಂಧಿ, ಬಾಲ್‌ ಗಂಗಾಧರ್‌ ತಿಲಕ್‌ ಅವರ ವಿರುದ್ಧ ಬಳಸಿ ಸ್ವಾತಂತ್ರ್ಯ ಹರಣ ಮಾಡಿದ್ದರು. 75 ವರ್ಷಗಳ ಬಳಿಕವೂ ಈ ಕಾನೂನು ಅಗತ್ಯವಿದೆಯೇ? ಕಾನೂನಿನ ದುರ್ಬಳಕೆ ಮತ್ತು ಕಾರ್ಯಾಂಗದ ಹೊಣೆಗಾರಿಕೆ ಇಲ್ಲದರ ಬಗ್ಗೆ ನಮಗೆ ಕಳಕಳಿ” ಇದೆ ಎಂದು ಸಿಜೆಐ ರಮಣ ಹೇಳಿದ್ದರು.