Supreme Court, Sedition  
ಸುದ್ದಿಗಳು

[ದೇಶದ್ರೋಹ] ಐಪಿಸಿ ಸೆಕ್ಷನ್ 124ಎ ಮರುಪರಿಶೀಲನೆ ಪ್ರಕ್ರಿಯೆ ಮುಂದುವರಿದ ಹಂತದಲ್ಲಿದೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ಕೇಂದ್ರದ ಪರ ಅತ್ಯುನ್ನತ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಈ ಬಗ್ಗೆ ಸಲ್ಲಿಸಿದ ವಾದ ಗಮನಿಸಿದ ನ್ಯಾಯಾಲಯ ಆಗಸ್ಟ್‌ಗೆ ಪ್ರಕರಣ ಮುಂದೂಡಿತು.

Bar & Bench

ದೇಶದ್ರೋಹವನ್ನು ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್‌ 124 ಎಯನ್ನು ಮರುಪರಿಶೀಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದುವರಿದ ಹಂತದಲ್ಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರದ ಪರ ಅತ್ಯುನ್ನತ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಈ ಬಗ್ಗೆ ಸಲ್ಲಿಸಿದ ವಾದ ಗಮನಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಆಗಸ್ಟ್‌ ಎರಡನೇ ವಾರಕ್ಕೆ ಪ್ರಕರಣವನ್ನು ಮುಂದೂಡಿತು.

“ಸರ್ಕಾರವು 124A ಅನ್ನು ಮರುಪರಿಶೀಲಿಸುವ ಪ್ರಕ್ರಿಯೆ ಆರಂಭಿಸಿದ್ದು ಸಮಾಲೋಚನೆಗಳು ಮುಂದುವರಿದ ಹಂತದಲ್ಲಿವೆ ಎಂದು ಅಟಾರ್ನಿ ಜನರಲ್‌ ಹೇಳುತ್ತಿದ್ದಾರೆ. ಈ ಹೇಳಿಕೆ ಮತ್ತು ಅವರ ಮನವಿ ಪರಿಗಣಿಸಿ ಆಗಸ್ಟ್ ಎರಡನೇ ವಾರದಲ್ಲಿ ಪ್ರಕರಣ ಆಲಿಸಲಿದ್ದೇವೆ" ಎಂದು ದೇಶದ್ರೋಹ ಕಾಯಿದೆಯ ಸಿಂಧುತ್ವ  ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ.

ದೇಶದ್ರೋಹದ ಕುರಿತಾದ ಕಾನೂನನ್ನು ಮೇ 11, 2022ರಂದು ತಡೆ ಹಿಡಿದಿದ್ದ ಸುಪ್ರೀಂ ಕೋರ್ಟ್‌ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A ಅಡಿಯಲ್ಲಿ ದೇಶದ್ರೋಹದ ಅಪರಾಧಕ್ಕಾಗಿ ಯಾವುದೇ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ಸೂಚಿಸಿತ್ತು.

ಕೇಂದ್ರ ಸರ್ಕಾರ ಸೆಕ್ಷನ್‌ 124 ಎ ಮರುಪರಿಶೀಲನೆ ಕಾರ್ಯ ಪೂರ್ಣಗೊಳಿಸುವವರೆಗೆ ದೇಶದ್ರೋಹದ ಕಾನೂನಿನಡಿ ಬಾಕಿ ಇರುವ ತನಿಖೆ ಮುಂದುವರಿಸದಂತೆ ಇಲ್ಲವೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿತ್ತು.

ಸುಪ್ರೀಂ ಕೋರ್ಟ್‌ನ ಈ ದೇಶದ್ರೋಹ ಪ್ರಕರಣಗಳಲ್ಲಿ ವಿಚಾರಣಾ ಕೈದಿಗಳಾಗಿ ಜೈಲಿನಲ್ಲಿದ್ದ ಅನೇಕ ವ್ಯಕ್ತಿಗಳಿಗೆ ವಿವಿಧ ನ್ಯಾಯಾಲಯಗಳು ಜಾಮೀನು ನೀಡಿದ್ದವು.

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್, ಈಗಾಗಲೇ 1962 ರಲ್ಲಿ ಕೇದಾರ್ ನಾಥ್ ಸಿಂಗ್ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ದೇಶದ್ರೋಹದ ಕಾನೂನಿನ ಆಕ್ಷೇಪಿತ ನಿಬಂಧನೆಯನ್ನು ಎತ್ತಿಹಿಡಿದಿರುವುದರಿಂದ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಬೇಕೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದರು. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಕೂಡ ವಾದವನ್ನು ಬೆಂಬಲಿಸಿದರು.

ಸಂವಿಧಾನದ 19ನೇ ವಿಧಿಯನ್ನು ಹೊಸ ರೀತಿಯಲ್ಲಿ ಮರುರೂಪಿಸಬೇಕಿದ್ದು ಹೀಗಾಗಿ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠವೇ ವಿಚಾರಣೆ ನಡೆಸಬೇಕೆಂದು ಕೋರಿದರು.

ಆಗ ಅಟಾರ್ನಿ ಜನರಲ್‌ ವೆಂಕಟರಮಣಿ ಅವರು ಸಂಸತ್ತಿಗೆ ಮರುಪರಿಶೀಲನಾ ಪ್ರಕ್ರಿಯೆ ಒಯ್ಯುವ ಮುನ್ನ ಸರ್ಕಾರ ತನ್ನೊಂದಿಗೆ ಚರ್ಚಿಸಲಿದೆ ಎಂದು ತಿಳಿಸಿದರು. “ಸಂಸತ್ತಿನಲ್ಲಿ ಚರ್ಚೆಗೆ ಹೋಗುವ ಮುನ್ನ ನನಗೆ ಪ್ರಕ್ರಿಯೆಯನ್ನು ತೋರಿಸಲಾಗುತ್ತದೆ. ಹಾಗಿರುವಾಗ ಈಗ ಇದನ್ನು ಏಕೆ (ವಿಚಾರಣೆಗೆ) ತೆಗೆದುಕೊಳ್ಳಬೇಕು” ಎಂದು ಅವರು ಕೇಳಿದರು. ನಂತರ ನ್ಯಾಯಾಲಯ ಪ್ರಕರಣವನ್ನು ಮುಂದೂಡುವುದಕ್ಕೆ ಸಮ್ಮತಿಸಿ ಆಗಸ್ಟ್‌ಗೆ ಮುಂದೂಡಿತು.