CJI NV Ramana hima Kohli and Surya Kant and sedition.
CJI NV Ramana hima Kohli and Surya Kant and sedition. 
ಸುದ್ದಿಗಳು

ದೇಶದ್ರೋಹ ಕಾನೂನು ತಡೆ ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ: ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ, ರಾಜ್ಯಗಳಿಗೆ ಸೂಚನೆ

Bar & Bench

ಮಹತ್ವದ ಬೆಳವಣಿಗೆಯೊಂದರಲ್ಲಿ ಐಪಿಸಿ ಸೆಕ್ಷನ್‌ 124 ಎ ಅಡಿಯಲ್ಲಿ ಯಾವುದೇ ದೇಶದ್ರೋಹ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ [ಎಸ್‌ ಜಿ ವೊಂಬತ್ಕೆರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇಂದ್ರ ಸರ್ಕಾರ ಕಾನೂನಿನ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಸೆಕ್ಷನ್ 124ಎ ಬಳಕೆಯನ್ನು ತಡೆಹಿಡಿಯುವಂತೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರ್ದೇಶಿಸಿತು.

ಜೊತೆಗೆ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಈ ಕಾನೂನಿನಡಿ ಬಾಕಿ ಉಳಿದಿರುವ ಎಲ್ಲಾ ವಿಚಾರಣೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

"ಸೆಕ್ಷನ್ 124ಎಯ ಕಾಠಿಣ್ಯತೆ ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಇದು ವಸಾಹತುಶಾಹಿ ಕಾನೂನಿಡಿಯಲ್ಲಿದ್ದ ದೇಶವನ್ನು ಉದ್ದೇಶಿಸಿತ್ತು ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದು ಸ್ಪಷ್ಟ. ಹೀಗಾಗಿ ಕೇಂದ್ರ ಅದನ್ನು ಮರುಪರಿಶೀಲಿಸಬಹುದು... ಮುಂದಿನ ಮರುಪರಿಶೀಲನೆ ಮುಗಿಯುವವರೆಗೆ ಅದನ್ನು ಬಳಸದೇ ಇರುವುದು ಸೂಕ್ತವಾಗಿರುತ್ತದೆ. ಮರುಪರಿಶೀಲನಾ ಕಾರ್ಯ ಪೂರ್ಣಗೊಳ್ಳುವವರೆಗೆ 124 ಎ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಎಫ್‌ಐಆರ್ ದಾಖಲಿಸುವುದನ್ನು ಅಥವಾ ಅದರಡಿ ವಿಚಾರಣೆ ಆರಂಭಿಸುವುದನ್ನು ನಿಲ್ಲಿಸುತ್ತವೆ ಎಂದು ನಾವು ಭಾವಿಸುತ್ತೇವೆ, ” ಎಂದು ನ್ಯಾಯಾಲಯ ಆದೇಶಿಸಿದೆ.

ಅಂತಹ ಪ್ರಕರಣಗಳು ದಾಖಲಾದರೆ, ಕಕ್ಷಿದಾರರಿಗೆ ನ್ಯಾಯಾಲಯಗಳನ್ನು ಸಂಪರ್ಕಿಸಲು ಸ್ವಾತಂತ್ರ್ಯವಿದ್ದು ನ್ಯಾಯಾಲಯಗಳು ಅಂತಹ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಪೀಠ ಸ್ಪಷ್ಟಪಡಿಸಿತು. “ದೇಶದ್ರೋಹ ಕಾನೂನಿನ ನಿಬಂಧನೆಯನ್ನು ತಡೆಹಿಡಿಯುವುದು ಸೂಕ್ತ ಎನಿಸುತ್ತದೆ” ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿತು.

ಐಪಿಸಿಯ ಸೆಕ್ಷನ್ 124ಎಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಯೋಧ, ಕರ್ನಾಟಕ ಮೂಲದ ನಿವೃತ್ತ ಯೋಧ ಎಸ್ ಜಿ ವೊಂಬತ್ಕೆರೆ ಹಾಗೂ ಮಾಧ್ಯಮ ಸಂಪಾದಕರ ಸಂಘಟನೆ 'ಎಡಿಟರ್ಸ್ ಗಿಲ್ಡ್' ಸಲ್ಲಿಸಿದ್ದ ಮನವಿಗಳನ್ನು ನ್ಯಾಯಾಲಯ ಆಲಿಸಿತು.