Pandit Jawaharlal Nehru (Centre), Kapil Sibal (Left) and SG Tushar Mehta (Right)
Pandit Jawaharlal Nehru (Centre), Kapil Sibal (Left) and SG Tushar Mehta (Right) 
ಸುದ್ದಿಗಳು

[ದೇಶದ್ರೋಹ] ನೆಹರೂ ಅವರಿಂದ ಏನು ಮಾಡಲಾಗಲಿಲ್ಲವೋ ಅದನ್ನು ಹಾಲಿ ಸರ್ಕಾರ ಮಾಡುತ್ತಿದೆ: ಸುಪ್ರೀಂಗೆ ಮೆಹ್ತಾ ವಿವರಣೆ

Bar & Bench

“ನಾವು ಸಂವಿಧಾನೋತ್ತರ ಕಾಲದಲ್ಲಿದ್ದೇವೆ. ದೇಶದ್ರೋಹ ನಿಬಂಧನೆಯು ಆಕ್ಷೇಪಣೀಯವಾಗಿದ್ದು, ಇದರಿಂದ ನಾವು ಆದಷ್ಟು ಬೇಗ ಹೊರಬರಬೇಕು ಎಂದು ಪಂಡಿತ್‌ ಜವಹರಲಾಲ್‌ ನೆಹರೂ ಹೇಳಿದ್ದರು” ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಹೇಳಿದರು.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ 124ಎ ಅಡಿ ದೇಶದ್ರೋಹವನ್ನು ಅಪರಾಧೀಕರಿಸುವ ಸಿಂಧುತ್ವವನ್ನು ಪ್ರಶ್ನಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ಸಿಬಲ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಹಾಲಿ ಕೇಂದ್ರ ಸರ್ಕಾರವು ದೇಶದ್ರೋಹ ಅಪರಾಧೀಕರಿಸುವುದನ್ನು ನಿರ್ಬಂಧಿಸಲು ಕಾರ್ಯಪ್ರವೃತ್ತವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಕಳಕಳಿ ಹೊಂದಿದ್ದು, ಐಪಿಸಿ ಸೆಕ್ಷನ್‌ 124ಎ ಅನ್ನು ಪುನರ್‌ಪರಿಶೀಲಿಸಲು ಕೇಂದ್ರ ಸರ್ಕಾರದ ನಿರ್ಧರಿಸಿದೆ ಎಂಬುದನ್ನು ಉಲ್ಲೇಖಿಸಿದರು. “ನೆಹರೂ ಅವರಿಂದ ಏನನ್ನು ಮಾಡಲಾಗಲಿಲ್ಲವೋ ಅದನ್ನು ಹಾಲಿ ಕೇಂದ್ರ ಸರ್ಕಾರ ಮಾಡುತ್ತಿದೆ. ಆಗ ಪಂಡಿತ್‌ ನೆಹರೂ ಅವರು ಏನನ್ನು ಮಾಡಲಾಗಲಿಲ್ಲವೋ ಅದನ್ನು ನಾವು ಈಗ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಮೆಹ್ತಾ ಹೇಳಿದರು.

ಇದಕ್ಕೆ ಸಿಬಲ್‌ ಅವರು “ಇಲ್ಲವೇ ಇಲ್ಲ. ನೀವು ಅದನ್ನು ಮಾಡುತ್ತಿಲ್ಲ. ದೇಶದ್ರೋಹ ಕಾನೂನನ್ನು ನೀವು ಬೆಂಬಲಿಸುತ್ತಿದ್ದೀರಿ. ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದೀರಿ ಮಿಸ್ಟರ್‌ ಮೆಹ್ತಾ” ಎಂದರು.

ಮುಂದುವರಿದು ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸಿದ ಸಿಬಲ್‌ ಅವರು “ಪ್ರೀತಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಿಂಸಾಚಾರಕ್ಕೆ ಯಾವುದೇ ಪ್ರಚೋದನೆ ಇಲ್ಲದಿರುವವರೆಗೆ ಅಸಮಾಧಾನವನ್ನು ವ್ಯಕ್ತಪಡಿಸಲು ಯಾವುದೇ ವ್ಯಕ್ತಿ ಸ್ವತಂತ್ರರಾಗಿರಬೇಕು” ಎಂದರು.

ಕೇಂದ್ರ ಸರ್ಕಾರವು ಐಪಿಸಿ ಸೆಕ್ಷನ್‌ 124ಎ ಅನ್ನು ಪುನರ್‌ಪರಿಶೀಲಿಸುವವರೆಗೆ ಬಾಕಿ ಇರುವ ದೇಶದ್ರೋಹ ಪ್ರಕರಣಗಳನ್ನು ಬಾಕಿ ಇಡುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದು, ಇಂದು ತನ್ನ ನಿಲುವು ತಿಳಿಸುವಂತೆ ಸೂಚಿಸಿತು.