ಸುದ್ದಿಗಳು

ಗಾಂಧೀಜಿ, ತಿಲಕ್ ವಿರುದ್ಧ ಬಳಕೆಯಾಗಿದ್ದ ದೇಶದ್ರೋಹ ಕಾನೂನು ಈಗ ದುರ್ಬಳಕೆಯಾಗುತ್ತಿದೆ: ಸುಪ್ರೀಂಕೋರ್ಟ್‌

ಪೊಲೀಸರು ಯಾರನ್ನಾದರೂ ಸಿಲುಕಿಸಲು ಬಯಸಿದರೆ, ಅವರು ಐಪಿಸಿ ಸೆಕ್ಷನ್ 124 ಎ ಬಳಸಿಕೊಳ್ಳಬಹುದು ಮತ್ತು ಇದನ್ನು ಪ್ರಯೋಗಿಸಿದಾಗ ಪ್ರತಿಯೊಬ್ಬರೂ ಕೊಂಚ ಭೀತಿಗೊಳಗಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ರಾಷ್ಟ್ರದ್ರೋಹವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್ 124 ಎ, ದೇಶ ಸ್ವಾತಂತ್ರ್ಯ ಪಡೆಯುವ ಮೊದಲು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ ಮತ್ತು ಬಾಲ ಗಂಗಾಧರ್ ತಿಲಕರ ಸದ್ದಡಗಿಸಲು ಬ್ರಿಟಿಷರು ಬಳಸಿದ ನಿಬಂಧನೆಯಾಗಿತ್ತು ಎಂದು ಸುಪ್ರೀಂಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಒಬ್ಬ ವ್ಯಕ್ತಿಯ ಅಭಿಪ್ರಾಯವನ್ನು ಮತ್ತೊಬ್ಬ ವ್ಯಕ್ತಿ ಇಷ್ಟಪಡದಿದ್ದಾಗ ಈ ಸೆಕ್ಷನ್‌ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಕಾರ್ಯಾಂಗಕ್ಕೆ ಇದರ ಹೊಣೆಗಾರಿಕೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅಭಿಪ್ರಾಯಪಟ್ಟರು.

“ವಿವಾದ ಎಂದರೆ, ಇದು ವಸಾಹತುಶಾಹಿ ಕಾಲದ ಕಾನೂನಾಗಿದ್ದು ಬ್ರಿಟಿಷರು ಸ್ವಾತಂತ್ರ್ಯದ ದಮನಕ್ಕಾಗಿ ಮತ್ತು ಮಹಾತ್ಮ ಗಾಂಧಿ, ಬಾಲಗಂಗಾಧರ್‌ ತಿಲಕ್‌ ಅವರ ವಿರುದ್ಧ ಇದನ್ನು ಬಳಸಿದರು. ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರವೂ ಈ ಕಾನೂನು ಇನ್ನೂ ಅಗತ್ಯವಿದೆಯೇ? ಕಾನೂನಿನ ದುರುಪಯೋಗವಾಗುತ್ತಿರುವುದು ಮತ್ತು ಕಾರ್ಯಾಂಗದ ಉತ್ತರದಾಯಿತ್ವ ಇಲ್ಲದಿರುವುದು ನಮ್ಮ ಆತಂಕ” ಎಂದು ಸಿಜೆಐ ರಮಣ ತಿಳಿಸಿದರು.

ಪೊಲೀಸರು ಯಾರನ್ನಾದರೂ ಸಿಲುಕಿಸಲು ಬಯಸಿದರೆ, ಅವರು ಐಪಿಸಿ ಸೆಕ್ಷನ್ 124 ಎ ಬಳಸಿಕೊಳ್ಳಬಹುದು ಮತ್ತು ಇದನ್ನು ಪ್ರಯೋಗಿಸಿದಾಗ ಪ್ರತಿಯೊಬ್ಬರೂ ಕೊಂಚ ಭೀತಿಗೊಳಗಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ದೇಶದ್ರೋಹದ ಸೆಕ್ಷನ್‌, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಅದನ್ನು ಸಾಧಿಸಲು ಬಯಸುವ ಉದ್ದೇಶಕ್ಕೆ ಸರಿಹೊಂದುವುದಿಲ್ಲ ಎಂದು ತಿಳಿಸಿ ನಿವೃತ್ತ ಸೇನಾಧಿಕಾರಿ ಎಸ್‌ ಜಿ ಒಂಬತ್ತುಕೆರೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಟಾರ್ನಿ ಜನರಲ್‌ ಅವರ ನೆರವು ಕೇಳಿತ್ತು.

ಗುರುವಾರದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಈ ನಿಬಂಧನೆಯನ್ನು ರದ್ದುಗೊಳಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

“ಸೆಕ್ಷನ್‌ ರದ್ದುಪಡಿಸುವ ಅಗತ್ಯವಿಲ್ಲ. ಬದಲಿಗೆ ಮಾರ್ಗಸೂಚಿ ರೂಪಿಸಬೇಕು. ಹಾಗೆ ಮಾಡಿದರೆ ಐಪಿಸಿ ಸೆಕ್ಷನ್‌ನ ಕಾನೂನು ಉದ್ದೇಶ ಈಡೇರಿದಂತಾಗುತ್ತದೆ” ಎಂದು ಎಜಿ ವಾದಿಸಿದರು.

ದೇಶದ್ರೋಹದ ನಿಬಂಧನೆ ಹೊರತುಪಡಿಸಿ ಅನೇಕ ಸ್ವಾತಂತ್ರ್ಯ ಪೂರ್ವ ಕಾನೂನುಗಳನ್ನು ಸರ್ಕಾರ ರದ್ದುಪಡಿಸಿದೆ ಎಂದು ನ್ಯಾಯಾಲಯ ಹೇಳಿತು. "ಸರ್ಕಾರ ಈಗ ಹಲವಾರು ಕಾನೂನುಗಳನ್ನು ರದ್ದುಪಡಿಸಿದೆ. ನೀವು ಇದನ್ನು (ದೇಶದ್ರೋಹದ ಸೆಕ್ಷನ್‌ ಅನ್ನು) ಏಕೆ ನೋಡುತ್ತಿಲ್ಲ ಎಂದು ತಿಳಿಯುತ್ತಿಲ್ಲ" ಎಂಬುದಾಗಿ ನ್ಯಾಯಾಲಯ ಹೇಳಿದೆ.

"(ಒಂದು ವೇಳೆ) ಕೆಲವು ಪಕ್ಷಕಾರರು ಇತರೆ ಪಕ್ಷಕಾರರ ಧ್ವನಿ ಆಲಿಸಲು ಬಯಸದಿದ್ದರೆ ಇಂತಹ ಕಾನೂನುಗಳ ಮೂಲಕ ಇತರರನ್ನು ಅದರಲ್ಲಿ ಸಿಲುಕಿಸುತ್ತಾರೆ. ವ್ಯಕ್ತಿಗಳಿಗೆ (ಅವರ ಸ್ವಾತಂತ್ರ್ಯಕ್ಕೆ) ಇದು ಗಂಭೀರ ಪ್ರಶ್ನೆಯಾಗಿದೆ” " ಎಂದು ಹೇಳಿತು.

ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರನ್ನೂ ಒಳಗೊಂಡ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೋಟಿಸ್ ಸ್ವೀಕರಿಸಿದರು.