Justice M Nagaprasanna and Karnataka HC
Justice M Nagaprasanna and Karnataka HC 
ಸುದ್ದಿಗಳು

ಜಪ್ತಿಯಾದ ಚಿನ್ನ ಪೊಲೀಸ್ ವಶದಲ್ಲಿ 1 ತಿಂಗಳು ದಾಟುವಂತಿಲ್ಲ, ಸಂಬಂಧಪಟ್ಟವರ ಮಧ್ಯಂತರ ಸುಪರ್ದಿಗೆ ನೀಡಬೇಕು: ಹೈಕೋರ್ಟ್‌

Bar & Bench

ಅಪರಾಧ ಪ್ರಕರಣಗಳ ತನಿಖೆಯ ವೇಳೆ ಜಪ್ತಿ ಮಾಡಲಾದ ಚಿನ್ನದ ಗಟ್ಟಿ ಅಥವಾ ಆಭರಣಗಳನ್ನು ಗರಿಷ್ಠವೆಂದರೆ ಹದಿನೈದು ದಿನದಿಂದ ಒಂದು ತಿಂಗಳವರಗೆ ಮಾತ್ರ ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ, ನಂತರ ಅದನ್ನು ಸಂತ್ರಸ್ತ ಅಥವಾ ದೂರುದಾರರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರಿನ ಚಿನ್ನಾಭರಣದ ಮಳಿಗೆಯೊಂದರ ಮಾಲೀಕರು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಅರ್ಜಿದಾರರಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಅವರ ಮಧ್ಯಂತರ ಸುಪರ್ದಿಗೆ ನೀಡುವಂತೆ ಮೈಸೂರಿನ ಲಷ್ಕರ್ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನ ಬಿ ಇಂದರ್‌ ಚಂದ್ ಎನ್ನುವವರು ತಮ್ಮಿಂದ ಕಾಸರುಗೋಡು ಮೂಲದ ಹಮೀದ್‌ ಅಲಿ ಎನ್ನುವ ವ್ಯಕ್ತಿಯು ಒಂದು ಕೆಜಿ ಚಿನ್ನದ ಗಟ್ಟಿಯನ್ನು ಪಡೆದು ವಂಚನೆ ಮಾಡಿದ್ದಾರೆ ಎಂದು ಮೈಸೂರಿನ ಲಷ್ಕರ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಮೀದ್‌ ಹಾಗೆ ಪಡೆದ ಚಿನ್ನವನ್ನು ಅರ್ಜಿದಾರರಿಗೆ ಮಾರಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ಮಳಿಗೆಯಿಂದ ಅರ್ಧ ಕೆಜಿ ಚಿನ್ನದ ಗಟ್ಟಿ ವಶಪಡಿಸಿಕೊಂಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ತಮ್ಮಿಂದ ವಶಪಡಿಸಿಕೊಳ್ಳಲಾದ ಚಿನ್ನದ ಗಟ್ಟಿಯನ್ನು ಮರಳಿಸಲು ಪೊಲೀಸರಿಗೆ ನಿರ್ದೇಶಿಸಲು ಕೋರಿ ಅರ್ಜಿದಾರರು ಮೈಸೂರಿನ ಜೆಎಂಎಫ್‌ಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಅರ್ಜಿದಾರರ ಮನವಿ ವಜಾಗೊಂಡಿತು. ಮುಂದೆ ಮೈಸೂರಿನ ಸೆಷನ್ಸ್‌ ನ್ಯಾಯಾಲಯ ಕೂಡ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ ಆದೇಶ: ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲದೆ ಇರುವುದರಿಂದ ಸಂತ್ರಸ್ತರಾಗಿರುವ ಅರ್ಜಿದಾರರ ಸುಪರ್ದಿಗೆ ಚಿನ್ನದ ಗಟ್ಟಿ ನೀಡಬೇಕು ಎನ್ನುವ ವಾದವನ್ನು ಅರ್ಜಿದಾರರ ಪರ ವಕೀಲರು ಮಂಡಿಸಿದರು. ಇತ್ತ ಪ್ರಾಸಿಕ್ಯೂಷನ್‌ ಪರ ವಕೀಲರು ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಪ್ತಿ ಮಾಡಲಾದ ಚಿನ್ನವನ್ನು ಅರ್ಜಿದಾರರ ವಶಕ್ಕೆ ನೀಡಬಾರದು ಎಂದು ಪ್ರತಿಪಾದಿಸಿದರು.

ಅಂತಿಮವಾಗಿ ಪೀಠವು ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ, ತನಿಖೆಯ ವೇಳೆ ವಶಪಡಿಸಿಕೊಂಡ ವಸ್ತುಗಳನ್ನು ಪೊಲೀಸ್ ಠಾಣೆಯಲ್ಲಿ ಹೆಚ್ಚೆಂದರೆ ಹದಿನೈದು ದಿನಗಳಿಂದ ಒಂದು ತಿಂಗಳವರೆ ಮಾತ್ರ ಇರಿಸಿಕೊಳ್ಳುವಂತೆ ವಿಚಾರಣಾ ನ್ಯಾಯಲಯ ನೋಡಿಕೊಳ್ಳಬೇಕು. ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಸಂಬಂಧಪಟ್ಟ ದುರುದಾರರ ಹಾಗೂ ಸಂತ್ರಸ್ತರ ಮಧ್ಯಂತರ ಸುಪರ್ದಿಗೆ ನೀಡುವ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿತು.

ಮುಂದುವರೆದು, ಜಪ್ತಿ ಮಾಡಲಾದ ವಸ್ತುಗಳನ್ನು ದೂರುದಾರರು-ಸಂತ್ರಸ್ತರಿಗೆ ನೀಡುವುದಕ್ಕೂ ಮೊದಲು ಅವುಗಳ ಸಮಗ್ರವಾದ ಪಂಚನಾಮೆ ಮಾಡಲು ಆದೇಶಿಸಿತು. ವಿಚಾರಣೆ ವೇಳೆ ಅವುಗಳನ್ನು ಹಾಜರುಪಡಿಸಲು ಸುಪರ್ದಿಗೆ ಪಡೆಯುವವರಿಂದ ಬಾಂಡ್ ಬರೆಸಿಕೊಳ್ಳಬೇಕು ಸೂಚಿಸಿ ಭದ್ರತಾ ಖಾತರಿ ಪಡೆದುಕೊಳ್ಳುವಂತೆ ತಿಳಿಸಿತು. ಇದಲ್ಲದೆ ಅಗತ್ಯವಿದ್ದರೆ ಸೂಕ್ತ ಷರತ್ತುಗಳನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಲು ಸ್ವತಂತ್ರ ಎಂದು ತಿಳಿಸಿತು.