Delhi High Court 
ಸುದ್ದಿಗಳು

ಕಾನೂನುಬದ್ಧವಾಗಿಯೇ ಆಮ್ಲಜನಕ ಸಾಂದ್ರಕ ಮಾರಾಟ: ದೆಹಲಿ ಹೈಕೋರ್ಟ್‌ಗೆ ಮ್ಯಾಟ್ರಿಕ್ ಸೆಲ್ಯುಲಾರ್ ವಿವರಣೆ

ರಾಷ್ಟ್ರ ರಾಜಧಾನಿಯ ಲೋಧಿ ಕಾಲೋನಿ ಮತ್ತು ಮೆಹ್ರೌಲಿಯಿಂದ ದೆಹಲಿ ಪೊಲೀಸರು ವಶಪಡಿಸಿಕೊಂಡ ಆಮ್ಲಜನಕ ಸಾಂದ್ರಕಗಳನ್ನು ತಕ್ಷಣ ಬಿಡುಗಡೆ ಮಾಡಲು ಮ್ಯಾಟ್ರಿಕ್ಸ್ ಸೆಲ್ಯುಲಾರ್ ಕಂಪೆನಿ ನ್ಯಾಯಾಲಯವನ್ನು ಕೋರಿದೆ.

Bar & Bench

ದೆಹಲಿಯ ಕೆಲ ಪ್ರದೇಶಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದ ತನ್ನ ಆಮ್ಲಜನಕ ಸಾಂದ್ರಕಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಮ್ಯಾಟ್ರಿಕ್ಸ್ ಸೆಲ್ಯುಲಾರ್ (ಇಂಟರ್ನ್ಯಾಷನಲ್) ಸರ್ವೀಸಸ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕೋವಿಡ್‌ ಮಹಾಮಾರಿಯಿಂದ ಉಂಟಾಗಿರುವ ಪ್ರತಿಕೂಲ ಸನ್ನಿವೇಶಗಳಿಂದಾಗಿ ಆನ್‌ಲೈನ್ ಪೋರ್ಟಲ್ ಮೂಲಕ ತನ್ನ ಗ್ರಾಹಕರಿಗೆ ಕಾನೂನುಬದ್ಧವಾಗಿ ಮಾರಾಟ ಮಾಡಲು ಆಮ್ಲಜನಕ ಸಾಂದ್ರಕ ಮತ್ತಿತರ ಸಾಧನಗಳನ್ನು ಆಮದು ಮಾಡಿಕೊಂಡು ಸಂಗ್ರಹಿಸಿಡಲಾಗಿತ್ತು ಎಂದು ಅದು ನ್ಯಾಯಾಲಯಕ್ಕೆ ವಿವರಿಸಿದೆ.

ತನ್ನ ಕಚೇರಿಗಳಲ್ಲಿ ಜನದಟ್ಟಣೆ ತಪ್ಪಿಸಲು, ದಾಸ್ತಾನನ್ನು 'ನೆಗೆ ಜು' ರೀತಿಯ ರೆಸ್ಟೊರೆಂಟ್‌ಗಳು, ಗೊತ್ತು ಪಡಿಸಿದ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಆದರೂ, ಅಧಿಕಾರಿಗಳು ಮೇ 5 ರಂದು ಸಂಗ್ರಹ ಕೇಂದ್ರ ಮತ್ತು ಮ್ಯಾಟ್ರಿಕ್ಸ್ ಕಚೇರಿಯ ಆವರಣ ಪ್ರವೇಶಿಸಿ ʼಆಧಾರರಹಿತವಾಗಿ ಹಾಗೂ ತಪ್ಪು ಕಲ್ಪನೆಯಿಂದ' ಇದು ಕಾಳಸಂತೆಯ ದಾಸ್ತಾನು ಎಂದು ಹೇಳಿ ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಅವುಗಳನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ ಎಂದು ಕಂಪೆನಿ ಅಹವಾಲು ತೋಡಿಕೊಂಡಿದೆ.

ದೆಹಲಿಯಲ್ಲಿ ಜನ ಆಮ್ಲಜನಕ ಸಾಂದ್ರಕಗಳಂತಹ ಅಗತ್ಯ ಸರಕುಗಳಿಲ್ಲದೆ ತಲ್ಲಣಗೊಂಡಿರುವಾಗ ಮನಸ್ವೇಚ್ಛೆಯಿಂದ ಬೇಜವಾಬ್ದಾರಿಯುತವಾಗಿ ಅವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದು ಒಪ್ಪುವಂತಹ ವಿಚಾರವಲ್ಲ ಎಂದು ಅದು ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಯೋಗೇಶ್ ಖನ್ನಾ ಅವರಿದ್ದ ಏಕ ಸದಸ್ಯ ಪೀಠ ಪೊಲೀಸರಿಂದ ಪ್ರಕರಣದ ಸ್ಥಿತಿಗತಿ ವರದಿ ಕೇಳಿ ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿತು. ಅರ್ಜಿದಾರ ಮ್ಯಾಟ್ರಿಕ್ಸ್‌ ಪರವಾಗಿ ಮೋಹಿತ್‌ ಮಾಥುರ್‌ ನೇತೃತ್ವದ ವಕೀಲರ ತಂಡ ವಾದ ಮಂಡಿಸಿತು. ಸರ್ಕಾರದವನ್ನು ವಕೀಲ ಸಂಜಯ್‌ ಲಾವೊ ಪ್ರತಿನಿಧಿಸಿದರು.