PM Modi 
ಸುದ್ದಿಗಳು

ದೇಶದ ವರ್ಚಸ್ಸಿಗೆ ಧಕ್ಕೆ ತರಲು ಕೆಲ ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರವೇ ಎತ್ತಿ ತೋರುವವರ ಬಗ್ಗೆ ಎಚ್ಚರವಿರಲಿ: ಪ್ರಧಾನಿ

ಕೆಲವರು ಮಾನವ ಹಕ್ಕುಗಳ ಉಲ್ಲಂಘನೆಯ ಹೆಸರಿನಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸುತ್ತಾರೆ. ದೇಶವು ಅಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ.

Bar & Bench

“ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಕೆಲವನ್ನು ಎತ್ತಿ ತೋರಿ ಮತ್ತೆ ಕೆಲವನ್ನು ಗೌಣವಾಗಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರಕಾರಿ. ಇದು ದೇಶದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತದೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) 28ನೇ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ರಾಜಕೀಯ ಮಸೂರದಿಂದ ಆಯ್ದ ಕೆಲ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನೋಡುವುದು ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿ. ಇದು ದೇಶದ ಪ್ರತಿಷ್ಠೆಗೆ ಕುಂದುಂಟು ಮಾಡುತ್ತದೆ. ನಾವು ಅಂತಹ ವ್ಯಕ್ತಿಗಳ ಬಗ್ಗೆ ತಿಳಿದಿರಬೇಕು. ಮಾನವ ಹಕ್ಕುಗಳ ಉಲ್ಲಂಘನೆಯನ್ನು ರಾಜಕೀಯ ಮಸೂರದಿಂದ ನೋಡುವ ಕೆಲವು ಜನರಿದ್ದಾರೆ. ಅಂಥವರ ಬಗ್ಗೆ ದೇಶ ಎಚ್ಚರಿಕೆಯಿಂದ ಇರಬೇಕಾಗುತ್ತದೆ” ಎಂದು ಮೋದಿ ಹೇಳಿದರು.

“ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಇರುವ ಇನ್ನೊಂದು ಭಾಗದ ಬಗ್ಗೆ ನಾನು ಇಂದು ಪ್ರಸ್ತಾಪಿಸಲು ಬಯಸುತ್ತೇನೆ. ತಮ್ಮ ಹಿತಾಸಕ್ತಿಯನ್ನು ಪರಿಶೀಲಿಸಿದ ಬಳಿಕ ಕೆಲವು ಜನರು ತಮ್ಮದೇ ಆದ ರೀತಿಯಲ್ಲಿ ಮಾನವ ಹಕ್ಕುಗಳ ಬಗ್ಗೆ ವಿವರಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಅವರಿಗೆ ಮಾನವ ಹಕ್ಕುಗಳ ಉಲ್ಲಂಘನೆ ಕಂಡರೆ ಕೆಲವು ಪ್ರಕರಣಗಳಲ್ಲಿ ಕಾಣುವುದಿಲ್ಲ. ಇಂಥ ಮನಸ್ಥಿತಿಯು ಮಾನವ ಹಕ್ಕುಗಳಿಗೆ ಧಕ್ಕೆ ತರುತ್ತದೆ. ರಾಜಕೀಯ ಮಸೂರದಿಂದ ನೋಡಿದಾಗ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಂತೆ ಕಾಣುತ್ತದೆ. ಇಂತಹ ಕೆಲವೊಂದನ್ನು ಮಾತ್ರವೇ ಹೆಕ್ಕುವ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿ. ಕೆಲವರು ಮಾನವ ಹಕ್ಕುಗಳ ಉಲ್ಲಂಘನೆಯ ಹೆಸರಿನಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸುತ್ತಾರೆ. ದೇಶವು ಅಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು” ಎಂದರು.

“ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನಾವು ಗಮನ ಕೇಂದ್ರೀಕರಿಸಬೇಕು. ಆಗ ಮಾತ್ರವೇ ನಾವು ಹಕ್ಕುಗಳನ್ನು ಬಲವಾಗಿ ಕೇಳಬಹುದು” ಎಂದರು.

“ವೃತ್ತಿಪರ ಮಹಿಳೆಯರಿಗೆ ಭಾರತವು 26 ವಾರಗಳ ಮಾತೃತ್ವ ರಜೆ ನೀಡುತ್ತದೆ. ಇದು ನವಜಾತ ಶಿಶುವಿನ ಹಕ್ಕಾಗಿದೆ. 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ, ಕೌನ್ಸೆಲಿಂಗ್‌, ವೈದ್ಯಕೀಯ ಸಹಾಯ ಇತ್ಯಾದಿಯನ್ನು ಮಹಿಳೆಯರು ಒಂದೇ ಸೂರಿನಡಿ ಪಡೆಯಬಹುದಾಗಿದೆ. ಮಹಿಳೆಯರ ವಿರುದ್ಧದ ಅಪರಾಧ ನಿಯಂತ್ರಿಸಲು 650ಕ್ಕೂ ಹೆಚ್ಚು ತ್ವರಿತ ನ್ಯಾಯಾಲಯಗಳನ್ನು ಆರಂಭಿಸಲಾಗಿದೆ. ಅತ್ಯಾಚಾರದಂಥ ಆರೋಪದಲ್ಲಿ ಸಿಲುಕಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ಅವರು ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಮಾಡಿರುವ ಯತ್ನಗಳನ್ನು ವಿವರಿಸಿದರು.

“ತ್ರಿವಳಿ ತಲಾಖ್‌ಗೆ ಅಂತ್ಯ ಹಾಡುವ ದೃಷ್ಟಿಯಿಂದ ಕಾನೂನು ಜಾರಿಗೊಳಿಸಿದ್ದೇವೆ. ಮುಸ್ಲಿಮ್‌ ಮಹಿಳೆಯರು ಪತ್ನಿಯ ಹೊರತಾಗಿಯೂ ಹಜ್‌ಗೆ ತೆರಳುವ ಸ್ವಾತಂತ್ರ್ಯವನ್ನು ನಾವು ಕಲ್ಪಿಸಿದ್ದೇವೆ. ಬಾಲಾಪರಾಧಿಗಳು, ತೃತೀಯ ಲಿಂಗಿಗಳು ಮತ್ತು ಅಂಗವಿಕಲರ ರಕ್ಷಣೆಗಾಗಿ ಕಾನೂನನ್ನು ಬಲಪಡಿಸಲಾಗಿದೆ” ಎಂದೂ ಇದೇ ಸಂದರ್ಭದಲ್ಲಿ ವಿವರಿಸಿದರು.

“ಕೋವಿಡ್‌ ಅನ್ನು ದಿಟ್ಟವಾಗಿ ಎದುರಿಸುವ ಮೂಲಕ ಎಲ್ಲಾ ಊಹೆಗಳನ್ನು ನಾವು ತಪ್ಪು ಎಂಬುದು ಸಾಬೀತುಪಡಿಸಿದ್ದೇವೆ. ಇಂಥ ಕಠಿಣ ಸಂದರ್ಭದಲ್ಲೂ ಒಬ್ಬೇ ಒಬ್ಬ ಬಡವ ಹಸಿವಿನಿಂದ ಬಳಲದಂತೆ ಎಚ್ಚರವಹಿಸಿದ್ದೇವೆ. 80 ಕೋಟಿ ಜನರಿಗೆ ಉಚಿತವಾಗಿ ಆಹಾರಧಾನ್ಯ ವಿತರಿಸುತ್ತಿದ್ದೇವೆ. ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯನ್ನೂ ಜಾರಿಗೊಳಿಸಲಾಗಿದೆ” ಎಂದರು.

“ದೇಶದಲ್ಲಿ ಇಂದು ರೈತರು ಮೂರನೇ ವ್ಯಕ್ತಿಯಿಂದ ಸಾಲ ಪಡೆಯುವ ಸ್ಥಿತಿ ಇಲ್ಲ. ಅವರಿಗಾಗಿ ಕಿಸಾನ್‌ ಸಮ್ಮಾನ್‌, ಫಸಲ್‌ ಬೀಮಾ ಯೋಜನೆಗಳಿವೆ” ಎಂದು ಹೇಳಿದ್ದಾರೆ.

“ನ್ಯಾಯ ಮತ್ತು ಶಾಂತಿ ಪರಸ್ಪರ ಪೂರಕವಾಗಿದ್ದು, ನಮ್ಮ ಕಾನೂನು ವ್ಯವಸ್ಥೆಯು ಅದರ ಮೇಲೆ ಆಧಾರಿತವಾಗಿದೆ. ತ್ವರಿತ ನ್ಯಾಯವನ್ನು ಪಡೆಯುವುದು ಮಾನವನ ಮೂಲಭೂತ ಹಕ್ಕು, ಇದು ಇನ್ನೂ ಕನಸಾಗಿದೆ. ವ್ಯಾಜ್ಯದ ವೆಚ್ಚಗಳು ಕೈಗೆಟುಕುವಂತಿಲ್ಲ ಎಂಬುದು ಸತ್ಯ ಎಂದಿದ್ದಾರೆ.