Karnataka HC
Karnataka HC 
ಸುದ್ದಿಗಳು

ವಿದ್ಯಾರ್ಥಿಗಳಿಗೆ ಮಾದಕ ವಸ್ತು: ನೈಜೀರಿಯಾ ಪ್ರಜೆ ಬಂಧನ ಅನುಮೋದಿಸಿದ್ದ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

Bar & Bench

ಬೆಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ನೈಜೀರಿಯಾ ಪ್ರಜೆಯ ಬಂಧನಕ್ಕೆ ನಗರ ಪೊಲೀಸರು ಹೊರಡಿಸಿದ್ದ ಆದೇಶ ಹಾಗೂ ಅದನ್ನು ಅನುಮೋದಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ-1988ರ ಸೆಕ್ಷನ್ 3(1)ರ ಅಡಿಯಲ್ಲಿ ತಮ್ಮ ವಿರುದ್ಧ ಹೊರಡಿಸಿದ್ದ ಬಂಧನ ಆದೇಶ ರದ್ದುಪಡಿಸುವಂತೆ ಕೋರಿ ನೈಜೀರಿಯಾ ಪ್ರಜೆ ನಾನ್ಸೊ ಜೋಚಿನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಮನವಿಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್ 3(1)ರ ಅಡಿಯಲ್ಲಿ ಬಂಧನ ಆದೇಶ ಹೊರಡಿಸಿದರೆ, ಆರೋಪಿಗೆ ಒಂದು ವರ್ಷ ಕಾಲ ಜಾಮೀನು ಲಭ್ಯವಾಗುವುದಿಲ್ಲ. ಒಂದು ವರ್ಷದವರೆಗೆ ಬಂಧನ ಆದೇಶ ಜಾರಿಯಲ್ಲಿರುತ್ತದೆ. ಉದ್ಯಮ ವೀಸಾ ಪಡೆದು ಭಾರತಕ್ಕೆ ಬಂದು ಬೆಂಗಳೂರಿನ ಹೊರಮಾವಿನಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆ ನಾನ್ಸೊ ಜೋಚಿನ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಸಿಸಿಬಿ ಮಾದಕ ವಸ್ತು ನಿಗ್ರಹ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ವರದಿ ಮೇರೆಗೆ ಜೋಚಿನ್ ಅವರನ್ನು ಬಂಧಿಸಲು ನಗರದ ಪೊಲೀಸ್ ಆಯುಕ್ತರು 2021ರ ಮೇ 3ರಂದು ಆದೇಶ ಹೊರಡಿಸಿದ್ದರು. ಅದರಂತೆ ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ಈ ಬಂಧನ ಆದೇಶ ಕೈಬಿಡುವಂತೆ ಕೋರಿ ನಗರ ಪೊಲೀಸ್ ಆಯುಕ್ತರು ಮತ್ತು ರಾಜ್ಯ ಸರ್ಕಾರಕ್ಕೆ 2021ರ ಜೂನ್‌ 1ರಂದು ಆರೋಪಿ ಮನವಿ ಸಲ್ಲಿಸಿದ್ದ. ಅದನ್ನು ಜೂನ್‌ 3ರಂದು ನಗರ ಪೊಲೀಸ್ ಆಯುಕ್ತರು ತಿರಸ್ಕರಿಸಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರವು ಮನವಿಯನ್ನು ಸಲಹಾ ಸಮಿತಿಗೆ ಕಳುಹಿಸಿತ್ತು. ಸಮಿತಿ ನೀಡಿದ್ದ ವರದಿ ಆಧರಿಸಿ ಬಂಧನ ಆದೇಶವನ್ನು ಡಿಸೆಂಬರ್‌ 18ರಂದು ರಾಜ್ಯ ಸರ್ಕಾರ ಅನುಮೋದಿಸಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, ತನ್ನ ಮನವಿ ಪರಿಗಣಿಸುವಲ್ಲಿ ಸರ್ಕಾರ ವಿಳಂಬ ಮಾಡಿದೆ. ಇದರಿಂದ ಬಂಧನ ಆದೇಶ ರದ್ದುಪಡಿಸುವಂತೆ ಕೋರಿದ್ದರು.

ಸರ್ಕಾರಿ ಅಭಿಯೋಜಕ ಪಿ ತೇಜೇಶ್ ಅವರು “ಅರ್ಜಿದಾರರ ಮನವಿ ಪತ್ರವನ್ನು ಜೂನ್‌ 14ರಂದು ಸಲಹಾ ಸಮಿತಿಗೆ ಸರ್ಕಾರ ಶಿಫಾರಸ್ಸು ಮಾಡಿತ್ತು. ಸಲಹಾ ಸಮಿತಿ ಜುಲೈ 7ರಂದು ನೀಡಿದ ವರದಿ ಆಧರಿಸಿ ಬಂಧನ ಆದೇಶವನ್ನು ಸರ್ಕಾರ ಅನುಮೋದಿಸಿದೆ. ನಗರ ಪೊಲೀಸ್ ಆಯುಕ್ತರು ಜೂನ್‌ 3ರಂದೇ ಮನವಿ ತಿರಸ್ಕರಿಸಿದ್ದರು. ಆದ್ದರಿಂದ ಸರ್ಕಾರ ನಿರ್ಣಯ ಕೈಗೊಂಡಿರುವುದರಲ್ಲಿ ವಿಳಂಬವಾಗಿಲ್ಲ” ಎಂದು ಪೀಠದ ಗಮನಕ್ಕೆ ತಂದರು.

ಈ ವಾದ ಪುರಸ್ಕರಿಸಿದ ಪೀಠವು ಸರ್ಕಾರದ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡಲು ಸಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

Nonso Joachin V. State of Karnataka.pdf
Preview