Facebook
Facebook 
ಸುದ್ದಿಗಳು

ಫೇಸ್‌ಬುಕ್‌ನಲ್ಲಿ ಸ್ನೇಹದ ಮನವಿಯು ಲೈಂಗಿಕ ಸಂಬಂಧ ಸೃಷ್ಟಿಗೆ ನೀಡುವ ಸ್ವಾತಂತ್ರ್ಯವಲ್ಲ: ಹಿಮಾಚಲ ಪ್ರದೇಶ ಹೈಕೋರ್ಟ್‌

Bar & Bench

ಅಪ್ರಾಪ್ತೆಯೊಬ್ಬರು ಫೇಸ್‌ಬುಕ್‌ನಲ್ಲಿ ಸ್ನೇಹದ ಮನವಿ ಕಳುಹಿಸಿದ ಮಾತ್ರಕ್ಕೆ ಅದು ಆರೋಪಿಗೆ ಲೈಂಗಿಕ ಸಂಬಂಧ ಸೃಷ್ಟಿಸಿಕೊಳ್ಳಲು ನೀಡುವ ಸ್ವಾತಂತ್ರ್ಯವಾಗುವುದಿಲ್ಲ ಎಂದಿರುವ ಹಿಮಾಚಲ ಪ್ರದೇಶ ಹೈಕೋರ್ಟ್‌ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ 19 ವರ್ಷದ ಯುವಕನಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ (ರಾಜೀವ್‌ ವರ್ಸಸ್‌ ಹಿಮಾಚಲ ಪ್ರದೇಶ ರಾಜ್ಯ).

ಅಪ್ರಾಪ್ತೆಯನ್ನು ಹೋಟೆಲ್‌ಗೆ ಕರೆದೊಯ್ದು ಆಕೆಯ ಜೊತೆ ಸಂಭೋಗ ನಡೆಸಿರುವ ಆರೋಪಿಯು ಸಂತ್ರಸ್ತೆಯು ಫೇಸ್‌ಬುಕ್‌ನಲ್ಲಿ ಸ್ನೇಹದ ಮನವಿ ಕಳುಹಿಸಿದ್ದಳು. ತನ್ನ ಹೆಸರಿನಲ್ಲಿ ಆಕೆ ಫೇಸ್‌ಬುಕ್‌ ಖಾತೆ ತೆರೆದಿದ್ದರಿಂದ ಆಕೆಗೆ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವಳಾಗಿರಬಹುದು ಎಂದು ಭಾವಿಸಿದ್ದಾಗಿ ವಾದಿಸಿದ್ದ. ಇದಕ್ಕೆ ನ್ಯಾಯಾಲಯವು ಸಂತ್ರಸ್ತೆ ಫೇಸ್‌ಬುಕ್‌ನಲ್ಲಿ ಸ್ನೇಹದ ಮನವಿ ಕಳುಹಿಸಿದ ಮಾತ್ರಕ್ಕೆ ಆಕೆಯ ಜೊತೆ ಲೈಂಗಿಕ ಸಂಬಂಧ ಸೃಷ್ಟಿಸಿಕೊಳ್ಳಲು ಆರೋಪಿಗೆ ಅದು ಹಕ್ಕು ಮತ್ತು ಸ್ವಾತಂತ್ರ್ಯ ನೀಡುವುದಿಲ್ಲ ಎಂದು ಹೇಳಿತು.

ಸಂತ್ರಸ್ತೆ ಫೇಸ್‌ಬುಕ್‌ನಲ್ಲಿ ಸ್ನೇಹದ ಮನವಿ ಕಳುಹಿಸಿದ ಮಾತ್ರಕ್ಕೆ ಆಕೆಯ ಜೊತೆ ಲೈಂಗಿಕ ಸಂಬಂಧ ಸೃಷ್ಟಿಸಿಕೊಳ್ಳಲು ಆರೋಪಿಗೆ ಅದು ಹಕ್ಕು ಮತ್ತು ಸ್ವಾತಂತ್ರ್ಯ ನೀಡುವುದಿಲ್ಲ.
ಹಿಮಾಚಲ ಪ್ರದೇಶ ಹೈಕೋರ್ಟ್‌

ಅರ್ಜಿದಾರರ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದಿರುವ ನ್ಯಾಯಮೂರ್ತಿ ಅನೂಪ್‌ ಚಿತ್ಕಾರ ಅವರು ಫೇಸ್‌ಬುಕ್‌ ನಿಬಂಧನೆಗಳ ಪ್ರಕಾರ ವ್ಯಕ್ತಿಗೆ 13 ವರ್ಷವಾಗಿದ್ದರೆ ಫೇಸ್‌ಬುಕ್‌ ಖಾತೆ ತೆರೆಯಬಹುದಾಗಿದೆ. 18 ವರ್ಷ ಆಗಬೇಕೆಂದು ಏನಿಲ್ಲ ಎಂದಿದ್ದಾರೆ. ಇಲ್ಲಿ ಒಪ್ಪಿಗೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿರುವ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ – 1860 ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯಿದೆ – 2012ರ ಪ್ರಕಾರ ವಿಧಿಸಲಾಗಿರುವ ವಯೋಮಿತಿ ನಿರ್ಬಂಧದ ಅನ್ವಯ 18 ವರ್ಷಗಳ ಒಳಗಿನ ಮಕ್ಕಳು ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.

“ಯುವ ಜನತೆ ಸ್ನೇಹದ ಮನವಿ ಕಳುಹಿಸುವ ಮೂಲಕ ಸಾಮಾಜಿಕ ಸಂಪರ್ಕ ಸಾಧಿಸುವುದು ಹೊಸ ಬೆಳವಣಿಗೆಯೇನಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳು ಲೈಂಗಿಕ ಸಂಬಂಧ ಹೊಂದಲು ಜೊತೆಗಾರರನ್ನು ಹುಡುಕಲು ಖಾತೆ ತೆರೆಯುತ್ತಾರೆ ಅಥವಾ ಅಂಥ ಆಹ್ವಾನ ಸ್ವೀಕರಿಸಲು ಖಾತೆ ತೆರೆಯುತ್ತಾರೆ ಎಂಬುದು ಸರಿಯಲ್ಲ. ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮ ಬಳಸುವುದು ರೂಢಿಗತವಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಜನರು ಬಳಸುವುದು ಸಂಪರ್ಕ, ತಿಳಿವಳಿಕೆ ಮತ್ತು ಮನರಂಜನೆಗಾಗಿಯೇ ವಿನಾ ಹಿಂಬಾಲಿಸಲ್ಪಟ್ಟು ಬೆದರಿಕೆಗೆ ಈಡಾಗಲು ಅಥವಾ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ತುತ್ತಾಗಲು ಅಲ್ಲ” ಎಂದು ನ್ಯಾಯಾಲಯ ಹೇಳಿದೆ.

ಫೇಸ್‌ಬುಕ್‌ನಲ್ಲಿ ಸಂತ್ರಸ್ತೆಯು ತನ್ನ ವಯಸ್ಸನ್ನು 18 ವರ್ಷ ಎಂದು ಘೋಷಿಸಿಕೊಂಡಿದ್ದಾರೆ ಎಂಬ ವಾದವು ಅಮುಖ್ಯವಾಗಿದೆ. ಅದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂದಿದೆ. ಸಾಮಾಜಿಕ ಮಾಧ್ಯಮವು ಸಾರ್ವಜನಿಕ ವೇದಿಕೆಯಾಗಿರುವುದರಿಂದ ಜನರು ತಮ್ಮ ವಯಸ್ಸು ಮತ್ತು ಗುರುತಿನ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸದಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಏಕಸದಸ್ಯ ಪೀಠ ಹೇಳಿದೆ.

“ಅಪ್ರಾಪ್ತರು ಫೇಸ್‌ಬುಕ್‌ನಲ್ಲಿ ತಪ್ಪಾದ ವಯಸ್ಸನ್ನು ಉಲ್ಲೇಖಿಸಿದರೆ ಅದು ಸಾರ್ವಕಾಲಿಕ ಸತ್ಯವಾಗುವುದಿಲ್ಲ. ಹಾಗೆ ಉಲ್ಲೇಖಿಸಿದ ಮಾತ್ರಕ್ಕೆ ಆ ವ್ಯಕ್ತಿಯು ಅಪ್ರಾಪ್ತರಲ್ಲವೆಂದೂ, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಕರು ಎಂದು ಮೇಲ್ನೋಟಕ್ಕೆ ಭಾವಿಸುವಂತಿಲ್ಲ” ಎಂದು ಪೀಠ ಒತ್ತಿ ಹೇಳಿದೆ.

ಹೀಗಾಗಿ, ಪ್ರಕರಣದ ವಿಲಕ್ಷಣ ಸಂಗತಿಗಳು ಮತ್ತು ಸನ್ನಿವೇಶಗಳು ಆರೋಪಿಗೆ ಜಾಮೀನು ಮಂಜೂರು ಮಾಡಲು ಪೂರಕವಾಗಿಲ್ಲ ಎಂದಿರುವ ಹಿಮಾಚಲ ಪ್ರದೇಶ ಹೈಕೋರ್ಟ್‌ ಜಾಮೀನು ಮನವಿಯನ್ನು ತಿರಸ್ಕರಿಸಿದೆ.