ಹಿರಿಯ ವಕೀಲರಾದ ದುಶ್ಯಂತ್ ದವೆ, ಅಭಿಷೇಕ್ ಮನು ಸಿಂಘ್ವಿ
ಹಿರಿಯ ವಕೀಲರಾದ ದುಶ್ಯಂತ್ ದವೆ, ಅಭಿಷೇಕ್ ಮನು ಸಿಂಘ್ವಿ 
ಸುದ್ದಿಗಳು

ಅದಾನಿ ಪವರ್ ಹಗರಣ: ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾದ ದವೆ, ಮನು ಸಿಂಘ್ವಿ ನಡುವೆ ವಾಕ್ಸಮರ

Bar & Bench

ಅದಾನಿ ಪವರ್‌ಗೆ ಸಂಬಂಧಿಸಿದ ಪ್ರಕರಣ ಮತ್ತು ಬಾಕಿ ಪಾವತಿಸಲು ವಿಳಂಬ ಪಾವತಿಗೆ ಸಂಬಂಧಿಸಿದ ಪ್ರಕರಣಗಳನ್ನು ಬುಧವಾರ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದ್ದ ವೇಳೆ ಹಿರಿಯ ವಕೀಲರಾದ ದುಶ್ಯಂತ್ ದವೆ ಮತ್ತು ಅಭಿಷೇಕ್ ಸಿಂಘ್ವಿ ನಡುವೆ ತೀವ್ರ ವಾಕ್ಸಮರ ನಡೆಯಿತು.

ಮುಖ್ಯ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಿದ್ದರೂ ಅದಾನಿ ಪವರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ ಎಂದು ಜೈಪುರ ವಿದ್ಯುತ್ ವಿತರಣ್‌ ನಿಗಮ್ ಲಿಮಿಟೆಡ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಪವರ್‌ ಪರ ಹಾಜರಾದ ಸಿಂಘ್ವಿ ಅವರು ಮಿಸೆಲೇನಿಯಸ್‌ ಅರ್ಜಿ ಸಲ್ಲಿಸಲು ಮುಂದಾದಾಗ ಮಾತಿನ ಚಕಮಕಿ ಆರಂಭವಾಯಿತು.

ಅರ್ಜಿ ನಿರ್ವಹಣಾರ್ಹವಾಗಿದ್ದು ಮಿಸೆಲೇನಿಯಸ್‌ ಅರ್ಜಿ ಸಲ್ಲಿಸಬಹುದು ಮತ್ತು ಸಲ್ಲಿಸಲಾಗುತ್ತದೆ. ಆದರೆ ನ್ಯಾಯಾಲಯ ಬೇರೆ ರೀತಿ ಹೇಳಿದರೆ ಪರಿಹಾರಕ್ಕಾಗಿ ತಾನು ಹಿಂದೆ ಸರಿಯುವುದಾಗಿ ಸಿಂಘ್ವಿ ತಿಳಿಸಿದರು.

ರಾಜಸ್ಥಾನ ಡಿಸ್ಕಾಮ್ ಪರ ಹಾಜರಿದ್ದ ದವೆ ತಕ್ಷಣ ಇದಕ್ಕೆ ಆಕ್ಷೇಪಿಸಿದರು. ಈ ಕ್ರಮವನ್ನು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಹಣೆಪಟ್ಟಿ ಹಚ್ಚಿದರು. "ಈ ಹಿಂದೆ ಸರಿಯುವ ಕಾಯಿಲೆಗೆ ನನ್ನ ವಿರೋಧ ಇದೆ. ಇದು ವಿಚಾರಣೆ ಪ್ರಕ್ರಿಯೆಯ ದುರುಪಯೋಗ" ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ, ಉಲ್ಲೇಖಿಸಲಾದ ನಿರ್ದಿಷ್ಟ ಕಾನೂನಿನ ಬಗ್ಗೆ ಸ್ಪಷ್ಟತೆ ಕೇಳಿದರು. ಜೊತೆಗೆ "ದುರುಪಯೋಗ" ರೀತಿಯ ಪದ ಬಳಸದಂತೆ ಎಚ್ಚರಿಕೆ ನೀಡಿದರು.

ಆದರೆ ಸಿಂಘ್ವಿ ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ದವೆ ಪ್ರತಿಪಾದಿಸಿದರು.

"ನೀವು ನ್ಯಾಯಾಲಯವನ್ನು ದಾರಿ ತಪ್ಪಿಸಿದ್ದೀರಿ! ಹೀಗೆ ಮಾಡುವುದಕ್ಕೆ ನಿಮಗೆ ಅವಕಾಶ ನೀಡಲಾಗದು. ರಾಜ್ಯ ಸರ್ಕಾರದಿಂದ 1,400 ಕೋಟಿ ರೂಪಾಯಿ ತೆಗೆದುಕೊಳ್ಳಲು ಕೋರಲಾಗಿದೆ. ಅವರು ಪೀಠದ ನ್ಯಾಯಾಂಗ ನಿಂದನೆ ಉಲ್ಲೇಖಗಳನ್ನು ತೋರಿಲ್ಲ" ಎಂದರು.

ಇದಲ್ಲದೆ, ಅದಾನಿ ಪವರ್ 'ನ್ಯಾಯಾಲಯ ತೋರಿರುವ ಕೃಪೆಯನ್ನು ಬಳಸಿ ಆಟವಾಡುತ್ತಿದೆ' ಎಂದು ದವೆ ಆರೋಪಿಸಿದರು. ಕಂಪನಿಯು ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ ಮತ್ತು ಕಂಪನಿಯ ವಿರುದ್ಧದ ಶೋಧನೆಗಳು ತ್ರಿಸದಸ್ಯ ಪೀಠದಿಂದ ಬಂದಿದ್ದು ಅದನ್ನು ವಿಭಾಗೀಯ ಪೀಠ ಮತ್ತೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

"ಮೇಲ್ಮನವಿಗಳಿಗೆ ಭಾಗಶಃ ಅವಕಾಶ ನೀಡಲಾಯಿತು. ಇದನ್ನು ನ್ಯಾಯಮೂರ್ತಿಗಳ ಗಮನಕ್ಕೆ ತರಲೇ ಇಲ್ಲ!" ಎಂದು ಅವರು ಹೇಳಿದರು.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ ವಿ ಸಂಜಯ್ ಕುಮಾರ್ ಅವರ ಪೀಠ ಈ ಬಿರುಸಿನ ಮಾತುಗಳಿಗೆ ಸಾಕ್ಷಿಯಾಯಿತು.

ಸುಪ್ರೀಂ ಕೋರ್ಟ್ ನಿಯಮಗಳ ವಿರುದ್ಧ ಅರ್ಜಿ ಸಲ್ಲಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ದವೆ ಅವರು ರಿಜಿಸ್ಟ್ರಿಯ ನಿರ್ಧಾರಗಳ ವಸ್ತುನಿಷ್ಠತೆಯನ್ನು ಪ್ರಶ್ನಿಸಿದರು.

ಮರುಪರಿಶೀಲನಾ ಅರ್ಜಿ ಸಲ್ಲಿಸದೆ ಮಿಸೆಲೇನಿಯಸ್‌ ಅರ್ಜಿಗಳನ್ನು ಸಲ್ಲಿಸಿದರೆ, ಅದನ್ನು ನಿರ್ವಹಿಸುವಂತಿಲ್ಲ ಎಂದು ತೀರ್ಪುಗಳೇ ಹೇಳಿವೆ ಎಂದು ಅವರು ಒತ್ತಿಹೇಳಿದರು.

ವಾಗ್ವಾದ ಮತ್ತಷ್ಟು ಕಾವೇರುತ್ತಿದ್ದಂತೆ ನ್ಯಾಯಾಲಯದ ಹೊರಗೆ ನಿರ್ಣಯಕ್ಕೆ ಬರುವಂತೆ ಪೀಠ ಸೂಚಿಸಿತು.

ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್

ಆದರೆ ಮಿಸೆಲೇನಿಯಸ್‌ ಅರ್ಜಿ ವಜಾಗೊಳಿಸುವಂತೆ ದವೆ ಒತ್ತಾಯಿಸಿದರು. ಈ ಹಂತದಲ್ಲಿ ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿ (ಎಪಿಟಿಇಎಲ್) ಮೊರೆ ಹೋಗುವಂತೆ ಸಿಂಘ್ವಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ದವೆ, ಅದಾನಿ ಪವರ್ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಬದಲಿಗೆ, ಕನಿಷ್ಠ 1 ಕೋಟಿ ರೂ ದಂಡ ವಿಧಿಸಬೇಕೆಂದು ಅವರು ವಿನಂತಿಸಿದರು.

ಮುಂದುವರೆದು, ಕಂಪನಿಯ ವಿರುದ್ಧ ಸುಳ್ಳುಸಾಕ್ಷಿ ವಿಚಾರಣೆ ನಡೆಸುವಂತೆಯೂ ಅವರು ಸೂಚಿಸಿದರು. ಜೊತೆಗೆ ಪ್ರಕರಣಗಳ ಪಟ್ಟಿ ಮಾಡುವಿಕೆ ಮತ್ತು ತೆಗೆದುಹಾಕುವಿಕೆ ಕುರಿತಂತೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ದವೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ ನ್ಯಾಯಾಲಯ ಅನಗತ್ಯ ವಿಚಾರಕ್ಕೆ ಕೈ ಹಾಕುವುದಿಲ್ಲ ಎಂದು ಭಾವಿಸುವೆ ಎಂದರು.