ಸುದ್ದಿಗಳು

ಎಸ್‌ಸಿಬಿಎ ಬಿಕ್ಕಟ್ಟು: ಪೀಠ ರಚಿಸುವಂತೆ ಸಿಜೆಐಗೆ ಪತ್ರ ಬರೆದ ಹಿರಿಯ ವಕೀಲ ವಿಕಾಸ್ ಸಿಂಗ್

ನ್ಯಾ. ಬೊಬ್ಡೆ ಅವರು ಸಮಸ್ಯೆ ಬಗೆಹರಿಸುವ ಸಂಬಂಧ ಪೀಠ ರಚಿಸಬೇಕು. ಇದರಿಂದಾಗಿ ಪ್ರಸ್ತುತ ಕಾರ್ಯಕಾರಿ ಸಮಿತಿಯೊಳಗಿನ ಬಿಕ್ಕಟ್ಟು ಅದಷ್ಟು ಬೇಗ ಪರಿಹಾರವಾಗಲಿದೆ ಎಂದು ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಕೋರಿದ್ದಾರೆ.

Bar & Bench

ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲು ಮತದಾನ ನಡೆಸುವ ಕುರಿತಂತೆ ಸುಪ್ರೀಂಕೋರ್ಟ್‌ ವಕೀಲರ ಸಂಘದಲ್ಲಿ ಎದ್ದಿರುವ ಬಿಕ್ಕಟ್ಟು ಪರಿಹರಿಸಲು ಮುಂದಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆಯವರನ್ನು ಹಿರಿಯ ನ್ಯಾಯವಾದಿ ವಿಕಾಸ್‌ ಸಿಂಗ್‌ ಕೋರಿದ್ದಾರೆ.

ನ್ಯಾ. ಬೊಬ್ಡೆ ಅವರು ಸಮಸ್ಯೆ ಬಗೆಹರಿಸುವ ಸಂಬಂಧ ಪೀಠ ರಚಿಸಬೇಕು. ಇದರಿಂದಾಗಿ ಪ್ರಸ್ತುತ ಕಾರ್ಯಕಾರಿ ಸಮಿತಿಯೊಳಗಿನ ಬಿಕ್ಕಟ್ಟು ಅದಷ್ಟು ಬೇಗ ಪರಿಹಾರವಾಗಲಿದೆ ಎಂದು ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಬರೆದ ಪತ್ರದಲ್ಲಿ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಕೇಳಿಕೊಂಡಿದ್ದಾರೆ. ಸಂಘದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ದುಶ್ಯಂತ್‌ ದವೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಕೂಡ ಸಿಂಗ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಸ್ತುತ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಈಗಾಗಲೇ ಮುಗಿದಿದೆ ಎಂಬ ಅಂಶವನ್ನು ಎತ್ತಿ ತೋರಿಸಿದ ದವೆ ಅವರು ಜನವರಿ 14 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಮೂಲಕ ಸಂಘದ ಮುಂಬರುವ ಚುನಾವಣಾ ವಿಧಾನಕ್ಕೆ ಸಂಬಂಧಿಸಿದಂತೆ ಸಂಘದ ಸದಸ್ಯರ ನಡುವೆ ಎದ್ದಿರುವ ಗೊಂದಲವನ್ನು ಜಾಹೀರುಗೊಳಿಸಿದರು. ಕೆಲವು ವಕೀಲರು ಅಂತರ ಕಾಯ್ದುಕೊಂಡಿರುವುದರಿಂದ ನಿಗದಿತ ಸಮಯದಲ್ಲಿ ವರ್ಚುವಲ್‌ ಚುನಾವಣೆ ನಡೆಸುವುದು ಅಸಾಧ್ಯ ಎಂದು ಪತ್ರದಲ್ಲಿ ದವೆ ವಿವರಿಸಿದ್ದರು.

“ಅವರ (ವಕೀಲರು) ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಅದಕ್ಕಾಗಿ ಯಾವುದೇ ಕಲಹ ನಡೆಸುವುದಿಲ್ಲ. ಇಂಥ ಸಂದರ್ಭದಲ್ಲಿ ಅಧ್ಯಕ್ಷನಾಗಿ ಮುಂದುವರೆಯುವುದು ನನಗೆ ನೈತಿಕವಾಗಿ ಸರಿ ಎನಿಸುವುದಿಲ್ಲ,” ಎಂದು ದವೆ ಹೇಳಿದ್ದರು. ದವೆ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಜನವರಿ 14 ರಂದು ರಾತ್ರಿ ಸಂಘದ ತುರ್ತು ಸಭೆ ನಡೆದು ರಾಜೀನಾಮೆಯನ್ನು ದೃಢಪಡಿಸಲಾಗಿತ್ತು. ಭೌತಿಕ ಮತ್ತು ವರ್ಚುವಲ್‌ ವಿಧಾನಗಳೆರಡನ್ನೂ (ಹೈಬ್ರಿಡ್‌ ವಿಧಾನ) ಬಳಸಿಕೊಂಡು ಫೆಬ್ರುವರಿ ಮೂರನೇ ವಾರದೊಳಗೆ ಮತದಾನ ನಡೆಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಗಿತ್ತು.

ಆದರೆ ಚುನಾವಣೆಯನ್ನು ಫೆಬ್ರವರಿ ಮೂರನೇ ವಾರದವರೆಗೆ ಮುಂದೂಡುವ ಕ್ರಮದ ಬಗ್ಗೆ ರಿಜಿಸ್ಟ್ರಾರ್‌ ಜನರಲ್‌ಗೆ ಬರೆದ ಪತ್ರದಲ್ಲಿ ಸಿಂಗ್‌ ಅನುಮಾನ ವ್ಯಕ್ತಪಡಿಸಿದ್ದಾರೆ. “ರಾಜೀನಾಮೆಯ ಪ್ರಹಸನ ಸೃಷ್ಟಿಸಿ ಅಲ್ಲಿಯವರೆಗೂ ತಮ್ಮ ಅಧಿಕಾರಾವಧಿ ಮುಂದುವರೆಸುವುದು, ನಂತರ ಕಾರ್ಯಕಾರಿ ಸಮಿತಿ ತನ್ನ ರಾಜೀನಾಮೆ ತಿರಸ್ಕರಿಸುವಂತೆ ಮಾಡುವುದು ದವೆ ಅವರ ಯತ್ನವಾಗಿದೆ,” ಎಂದು ಅವರು ಹೇಳಿದ್ದಾರೆ.

"ಡಿಸೆಂಬರ್ 13 ರಂದು ಕಾರ್ಯಕಾರಿ ಸಮಿತಿಯ ಅವಧಿ ಮುಗಿಯುತ್ತಿದ್ದಂತೆ ನವೆಂಬರ್ ಮೊದಲ ವಾರದಲ್ಲಿ ದವೆ ಅವರು ಚುನಾವಣಾ ಸಮಿತಿ ರಚಿಸಬೇಕಾಗಿತ್ತು. ಅವರು ನಿರ್ಧಾರ ತೆಗೆದುಕೊಳ್ಳಲು ಒಂದು ತಿಂಗಳು ತಡ ಮಾಡಿದರು. ಡಿಸೆಂಬರ್ 4 ರಂದು ತೀರ್ಮಾನ ಕೈಗೊಂಡ ಬಳಿಕವೂ ಅವರು ಚುನಾವಣಾ ಸಮಿತಿಗೆ ಸಂವಹನ ಮಾಡುವುದನ್ನು ಮತ್ತೊಂದು ವಾರ ವಿಳಂಬ ಮಾಡಿದರು. ವರ್ಚುವಲ್‌ ವಿಧಾನದಲ್ಲಿ ಚುನಾವಣೆ ನಡೆಸಲು ಸಮಿತಿ ಈಗಾಗಲೇ ನಿರ್ಧರಿಸಿದ್ದು ಆ ವೇಳೆ, ಎನ್‌ಎಸ್‌ಡಿಎಲ್ ನೇಮಕ ಮಾಡುವ ಚುನಾವಣಾ ಸಮಿತಿಯ ನಿರ್ಧಾರವನ್ನು ಅಂಗೀಕರಿಸಲು ಕಾರ್ಯಕಾರಿ ಸಮಿತಿಗೆ ಸೂಚಿಸುವ ಯಾವುದೇ ಪ್ರಮೇಯ ಇರಲಿಲ್ಲ. ಹೈಬ್ರಿಡ್‌ ವಿಧಾನ ಅಗತ್ಯವಿದೆ ಎಂದು ಅವರು ಬಯಸಿದ್ದರೆ ಅದನ್ನು 4ರಂದೇ ತಿಳಿಸಬಹುದಾಗಿತ್ತು” ಎಂದು ಸಿಂಗ್‌ ಹೇಳಿದ್ದಾರೆ. ವರ್ಚುವಲ್‌ ಚುನಾವಣೆ ನಡೆಸಿಕೊಡಲು ನ್ಯಾಷನಲ್‌ ಸೆಕ್ಯುರಿಟೀಸ್‌ ಡಿಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಅನ್ನು ಸಂಘ ಈ ಹಿಂದೆ ಕೋರಿತ್ತು.

ʼಬಾರ್ ಮತ್ತು ಬೆಂಚ್ʼ ಜೊತೆ ಮಾತನಾಡಿದ ಸಿಂಗ್, ಶುಕ್ರವಾರ ರಾತ್ರಿ ಎನ್‌ಎಸ್‌ಡಿಎಲ್ ಮೂಲಕ ಚುನಾವಣೆ ನಡೆಸುವ ನಿರ್ಧಾರ ಒಪ್ಪಲು ಸಂಘ ನಿರಾಕರಿಸಿದ್ದರಿಂದ ಎಸ್‌ಸಿಬಿಎ ಚುನಾವಣಾ ಸಮಿತಿ ರಾಜೀನಾಮೆ ನೀಡಿದೆ ಎಂದು ಹೇಳಿದರು.

"ಎನ್‌ಎಸ್‌ಡಿಎಲ್ ಮೂಲಕ ವರ್ಚುವಲ್‌ ಚುನಾವಣೆ ನಡೆಸುವ ನಿರ್ಧಾರವನ್ನು ಈಗಾಗಲೇ ಎಸ್‌ಸಿಬಿಎ ಅಂಗೀಕರಿಸಿದೆ. ಆದ್ದರಿಂದ ಚುನಾವಣಾ ಸಮಿತಿಯ ನಿರ್ಧಾರ ಧಿಕ್ಕರಿಸಿ ಬೆಲೆ ತೆರಲು ನಿರಾಕರಿಸಿದೆ" ಎಂದು ಸಿಂಗ್ ಹೇಳಿದರು.

ಈ ಮಧ್ಯೆ, ಹಿರಿಯ ವಕೀಲ ದುಶ್ಯಂತ್ ದವೆ ಅವರು ತಮ್ಮ ರಾಜೀನಾಮೆ ನಿರ್ಧಾರ ಪ್ರಾಮಾಣಿಕವಾದದ್ದು. 2020 ರ ನವೆಂಬರ್ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಮಾತುಕತೆ ನಡೆಸಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.

ಮತ್ತೊಂದೆಡೆ, ವಕೀಲರು ಎದುರಿಸುತ್ತಿರುವ ಕಷ್ಟಗಳನ್ನು ಪರಿಗಣಿಸಿ 2020ರ ಫೆಬ್ರವರಿ 1ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕ ಕಲಾಪ ಪುನರಾರಂಭಿಸುವಂತೆ ಸಿಜೆಐ ಬೊಬ್ಡೆ ಅವರಿಗೆ ಮನವಿ ಮಾಡಲು ಎಸ್‌ಸಿಬಿಎ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.