Justice Shekhar Kumar Yadav with Allahabad High Court 
ಸುದ್ದಿಗಳು

ನ್ಯಾ. ಶೇಖರ್‌ ಯಾದವ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಹಿರಿಯ ವಕೀಲರಿಂದ ಸಿಜೆಐ ಸಂಜೀವ್‌ ಖನ್ನಾಗೆ ಪತ್ರ

ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್‌ನ ಕಾನೂನು ಘಟಕ ಡಿಸೆಂಬರ್‌ 8ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮೂಲಕ ನ್ಯಾ. ಯಾದವ್‌ ಅವರು ವಿವಾದಕ್ಕೆ ನಾಂದಿ ಹಾಡಿದ್ದರು.

Bar & Bench

ವಿಶ್ವ ಹಿಂದೂ ಪರಿಷತ್‌ನಲ್ಲಿನ ವಿವಾದಾತ್ಮಕ ಭಾಷಣ ಮಾಡಿರುವ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲು ಕೇಂದ್ರೀಯ ತನಿಖಾ ದಳಕ್ಕೆ ನಿರ್ದೇಶಿಸುವಂತೆ ಕೋರಿ ಹದಿಮೂರು ವಕೀಲರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್‌ ಸೆಕ್ರೆಟರಿ ಜನರಲ್‌ ಮುಖೇನ ಸಿಜೆಐ ಅವರಿಗೆ ಪತ್ರ ಬರೆಯಲಾಗಿದ್ದು, ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಸೂರ್ಯಕಾಂತ್‌, ಹೃಷಿಕೇಶ್‌ ರಾಯ್‌ ಮತ್ತು ಅಭಯ್‌ ಶ್ರೀನಿವಾಸ್‌ ಓಕಾ ಅವರಿಗೂ ಪತ್ರ ಕಳುಹಿಸಲಾಗಿದೆ.

“ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ನ್ಯಾ. ಯಾದವ್‌ ಅವರ ಭಾಷಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಕೆ ವೀರಸ್ವಾಮಿ ಪ್ರಕರಣದಲ್ಲಿ ರೂಪಿಸಿರುವ ಕಾನೂನಿನ ಪ್ರಕಾರ ನ್ಯಾ. ಶೇಖರ್‌ ಕುಮಾರ್‌ ಯಾದವ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸಿಬಿಐಗೆ ನಿರ್ದೇಶಿಸಬೇಕು” ಎಂದು ಕೋರಲಾಗಿದೆ.

ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್‌, ಆಸ್ಪಿ ಚಿನೋಯ್‌, ನವರೋಜ್‌ ಸೀರ್ವಾಯ್‌, ಆನಂದ್‌ ಗ್ರೋವರ್‌, ಚಂದ್ರ ಉದಯ್‌ ಸಿಂಗ್‌, ಜೈದೀಪ್‌ ಗುಪ್ತಾ, ಮೋಹನ್‌ ವಿ ಕಾತರಕಿ, ಶೋಯೆಬ್‌ ಆಲಂ, ಆರ್‌ ವೈಗೈ, ಮಿಹಿರ್‌ ದೇಸಾಯಿ ಮತ್ತು ಜಯಂತ್‌ ಭೂಷಣ್‌ ಅವರು ಪತ್ರಕ್ಕೆ ಸಹಿ ಮಾಡಿದ್ದಾರೆ.

“ನ್ಯಾಯಮೂರ್ತಿ ಯಾದವ್‌ ಅವರು ಏಕರೂಪ ನಾಗರಿಕ ಸಂಹಿತೆಯ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದರೂ ಇಡೀ ಭಾಷಣವೂ ಸಾರ್ವಜನಿಕವಾಗಿ ಕೋಮು ದ್ವೇಷ ಹರಡುವುದಾಗಿತ್ತು. ನ್ಯಾ. ಯಾದವ್‌ ಅವರ ಭಾಷಣದಲ್ಲಿ ಶೈಕ್ಷಣಿಕ, ಕಾನೂನಾತ್ಮಕ ಅಥವಾ ನ್ಯಾಯಶಾಸ್ತ್ರದ ಅಂಶಗಳಿರಲಿಲ್ಲ” ಎಂದು ಪತ್ರದಲ್ಲಿ ವಿವರಿಸಲಾಗಿದೆ.

ನ್ಯಾ. ಯಾದವ್‌ ಅವರು ಭಾರತವು ಬಹುಸಂಖ್ಯಾತರ ಆಡಳಿತಕ್ಕೆ ಒಳಪಡಬೇಕು ಎಂದಿದ್ದರು. ಇದನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಇದು ಸಾಂವಿಧಾನಿಕ ತತ್ವಗಳಾದ ಸಮಾನತೆ, ಧರ್ಮಾತೀತವಾಗಿ ಎಲ್ಲರಿಗೂ ನ್ಯಾಯ ಒದಗಿಸುವುದಕ್ಕೆ ವಿರುದ್ಧವಾಗಿದ್ದು, ಅಲ್ಪಸಂಖ್ಯಾತರ ಹಕ್ಕುಗಳನ್ನು ಉಪೇಕ್ಷಿಸುತ್ತದೆ ಎಂದು ವಕೀಲರು ಟೀಕಿಸಿದ್ದಾರೆ.

“ನ್ಯಾ. ಯಾದವ್‌ ಅವರ ಭಾಷಣವು ನ್ಯಾಯಾಂಗ ನಿಷ್ಪಕ್ಷಪಾತತೆಗೆ ವಿರುದ್ಧವಾಗಿದ್ದು, ಬಹಿರಂಗವಾಗಿ ಒಂದು ಸಮುದಾಯದ ಜೊತೆ ಗುರುತಿಸಿಕೊಂಡು ಇನ್ನೊಂದು ಸಮುದಾಯದ ಬಗ್ಗೆ ನಿಂದಾನಾತ್ಮವಾಗಿ ಕಾಣಲಾಗಿದೆ. ಮುಸ್ಲಿಮ್‌ ಸಮುದಾಯವನ್ನು ಕಠ್‌ಮುಲ್ಲಾ ಎಂದು ಹೇಳಿರುವುದು ಆಘಾತಕಾರಿಯಾಗಿದೆ” ಎಂದು ವಿವರಿಸಲಾಗಿದೆ.

ನ್ಯಾ. ಯಾದವ್‌ ಅವರು ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ನ್ಯಾ. ಯಾದವ್‌ ವಿರುದ್ಧ ದ್ವೇಷ ಮಾಡಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 196 ಮತ್ತು 302ರ ಅಡಿ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಬೇಕು ಎಂದು ಕೋರಲಾಗಿದೆ.

“ಸಾರ್ವಜನಿಕ ಸಮಾರಂಭದಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರ ಇಂಥ ಭಾಷಣವು ಸಮುದಾಯಗಳ ನಡುವಿನ ಸಹಬಾಳ್ವೆಗೆ ಹಾನಿ ಮಾಡುವುದಲ್ಲದೇ ಜನರ ಮನಸ್ಸಿನಲ್ಲಿ ನ್ಯಾಯಾಂಗದ ಮೇಲಿನ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತತೆಯನ್ನು ನಾಶಪಡಿಸಲಿದೆ” ಎಂದು ಹೇಳಲಾಗಿದೆ.

ಸಿಜೆಐ ಜೊತೆ ಸಮಾಲೋಚನೆ ನಡೆಸದೇ ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತಿಲ್ಲ ಎಂದು 1991ರಲ್ಲಿ ಸುಪ್ರೀಂ ಕೋರ್ಟ್‌ ಕೆ ವೀರಸ್ವಾಮಿ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಹಿರಿಯ ವಕೀಲರು ಪತ್ರದಲ್ಲಿ ಉಲ್ಲೇಖಿಸಿದ್ದು, ನ್ಯಾ. ಯಾದವ್‌ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.