Pension, senior citizens 
ಸುದ್ದಿಗಳು

ಹಿರಿಯ ನಾಗರಿಕರು ಮನೆಯಿಂದ ಹೊರಗೆ ತೆರಳದೆ ಪಿಂಚಣಿ ಪಡೆಯಲು ಸಾಧ್ಯವೇ? ಸರ್ಕಾರದ ಸ್ಪಷ್ಟೀಕರಣ ಕೇಳಿದ ಹೈಕೋರ್ಟ್‌

“ಹಿರಿಯ ನಾಗರಿಕರು ಬ್ಯಾಂಕ್‌ಗೆ ತೆರಳಿ ಪಿಂಚಣಿಯನ್ನು ಪಡೆಯಬೇಕೆಂದು ರಾಜ್ಯ ಸರ್ಕಾರ ನಿರೀಕ್ಷಿಸಬಾರದು,” ಎಂದು ಹೇಳಿದ ನ್ಯಾಯಪೀಠ.

Bar & Bench

ಹಿರಿಯ ನಾಗರಿಕರು ತಮ್ಮ ಮನೆಯಲ್ಲಿಯೇ ಇದ್ದು ಪಿಂಚಣಿಯನ್ನು ಪಡೆಯುವ ಹಕ್ಕು ಹೊಂದಿದ್ದಾರೆಯೇ ಎನ್ನುವ ಬಗ್ಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಬಯಸಿತು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ರಾಜ್ಯದಲ್ಲಿಯೂ ಹಿರಿಯ ನಾಗರಿಕರಿಗೆ ಪಿಂಚಣಿಯನ್ನು ಹೆಚ್ಚಿಸಬೇಕು ಎಂದು ಕೋರಿ ಅರ್ಜಿದಾರ ವಕೀಲ ಕ್ಲಿಫ್ಟನ್ ಡಿ’ರೊಸಾರಿಯೊ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಈ ಸಂದರ್ಭದಲ್ಲಿ ಮೇಲಿನ ಸ್ಪಷ್ಟನೆ ಬಯಸಿತು.

ಕೋವಿಡ್‌-19ರಿಂದ ಮೃತಪಟ್ಟವರಲ್ಲಿ ಹಿರಿಯ ನಾಗರಿಕ ಸಂಖ್ಯೆಯೇ ಹೆಚ್ಚು ಎನ್ನುವುದನ್ನು ಪೀಠದ ಗಮನಕ್ಕೆ ಡಿ’ರೊಸಾರಿಯೊ ತಂದರು. ಇದೇ ವೇಳೆ, ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆಯ ವಿತರಣೆ ಹೇಗೆ ನಡೆಯುತ್ತಿದೆ ಎನ್ನುವ ಪ್ರಕ್ರಿಯೆಯನ್ನು ವಿವರವಾಗಿ ದಾಖಲೆಗಳ ಮೂಲಕ ಸಲ್ಲಿಸುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ವಿಚಾರಣೆಯ ವೇಳೆ ಡಿ’ರೊಸಾರಿಯೊ ಅವರು, ಕೇಂದ್ರ ಗೃಹ ಸಚಿವಾಲಯವು ಇದಾಗಲೇ ಆರೋಗ್ಯ ಸಮಸ್ಯೆಯಿರುವ 65 ವಯೋಮಾನ ಮೀರಿದ ಹಿರಿಯ ನಾಗರಿಕರು ಹಾಗೂ 10 ವರ್ಷದ ಕೆಳಗಿನ ಮಕ್ಕಳನ್ನು ತೀರಾ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಲ್ಲಿಯೇ ಉಳಿಯುವಂತೆ ಆದೇಶ ಹೊರಡಿಸಿರುವುದನ್ನೂ ಪೀಠದ ಗಮನಕ್ಕೆ ತಂದರು.

ಮನವಿಯನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರವನ್ನು ಉದ್ದೇಶಿಸಿ, “ನೀವು ಹಿರಿಯ ನಾಗರಿಕರು ಪಿಂಚಣಿ ಪಡೆಯಲು ಬ್ಯಾಂಕ್‌ಗಳಿಗೆ ತೆರಳಬೇಕೆಂದು ನಿರೀಕ್ಷಿಸಬಾರದು,” ಎಂದಿತು.

ಹಿರಿಯ ನಾಗರಿಕರ ಅವಶ್ಯಕತೆಗಳಿಗೆ ಅನುಗುಣವಾಗಿ ಆರೋಗ್ಯ ಶಿಬಿರಗಳು, ಔಷಧಿಗಳ ಲಭ್ಯತೆ ದೊರೆಯುವಂತಾಗಬೇಕು. ಅವರ ಆಹಾರ ಭದ್ರತೆ ಮತ್ತು ಸಾಮಾಜಿಕ ಭದ್ರತೆಯ ಹಕ್ಕುಗಳಿಗೆ ಚ್ಯುತಿ ಬಾರದಂತೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಹಿರಿಯ ನಾಗರಿಕರ ಜೀವನ ಮತ್ತು ಘನತೆಯನ್ನು ರಕ್ಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯು ಇದೇ ತಿಂಗಳ ಉತ್ತರಾರ್ಧದಲ್ಲಿ ಬರುವ ನಿರೀಕ್ಷೆ ಇದೆ.