Journalist Gowri Lankesh 
ಸುದ್ದಿಗಳು

ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ: ಎಸ್‌ಐಟಿ ಬಾಲರಾಜ್‌ ಸೇರಿ ಮೂವರಿಂದ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿ ದಾಖಲು

ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 13ರಂದು ಮುಂದುವರಿಸಿದ ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮುರುಳೀಧರ್‌ ಪೈ ಅವರು ಸವಾಲು ಮತ್ತು ಪಾಟೀ ಸವಾಲನ್ನು ದಾಖಲಿಸಿದರು.

Bar & Bench

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 13ರಿಂದ 17ರವರೆಗಿನ ಸಾಕ್ಷಿಗಳ ಸವಾಲು ಮತ್ತು ಪಾಟೀ ಸವಾಲನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಆಲಿಸಿದ್ದು, ವಿಶೇಷ ತನಿಖಾ ದಳದ (ಎಸ್‌ಐಟಿ) ಸದಸ್ಯ ಹಾಗೂ ಸರ್ಕಲ್‌ ಇನ್‌ಸ್ಟೆಕ್ಟರ್‌ ಬಾಲರಾಜ್‌ ಸೇರಿ ಮೂವರು ಹಾಗೂ ಬಾಕಿ ಉಳಿದಿದ್ದ ಇಬ್ಬರು ಸಾಕ್ಷಿಗಳ ವಿಚಾರಣೆಯನ್ನು ದಾಖಲಿಸಿಕೊಂಡಿದೆ.

ಮಾರ್ಚ್‌ 13ರಂದು ವಿಚಾರಣೆ ಮುಂದುವರಿಸಿದ ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮುರುಳೀಧರ್‌ ಪೈ ಅವರು ಸವಾಲು ಮತ್ತು ಪಾಟೀ ಸವಾಲನ್ನು ದಾಖಲಿಸಿದರು.

2018ರ ಮೇ 23ರಂದು ಆರೋಪಿ ಸುಜಿತ್‌ ಕುಮಾರ್‌ ಉಡುಪಿಯಲ್ಲಿ ವಾಸವಿದ್ದ ಮನೆಯನ್ನು ತಪಾಸಣೆ ನಡೆಸಿದ್ದ ಬಗ್ಗೆ ಬಾಲರಾಜ್ ಸಾಕ್ಷಿ ನುಡಿದರು. ಸುಜಿತ್‌ ಮನೆಯಲ್ಲಿ ಮತದಾರರ ಚೀಟಿ, ಕರ್ನಾಟಕ-ಮಹಾರಾಷ್ಟ್ರ ಭೂಪಟ, ಸನಾತನ ಸಂಸ್ಥೆಯ ಅಂಜಲಿ ಗಾಡ್ಗೀಳ್‌ ಎಂಬವರು ಬರೆದ ಲೇಖನದ ಜೆರಾಕ್ಸ್‌ ಪ್ರತಿ, 18 ಮೊಬೈಲ್‌ ಸೆಟ್‌ ಮತ್ತು 15 ಮೊಬೈಲ್‌ ಪೌಚು ಹಾಗೂ ಮೂರು ಮೊಬೈಲ್‌ ಖರೀದಿಗೆ ಸಂಬಂಧಿಸಿದ ರಸೀದಿಗಳನ್ನು ವಶಕ್ಕೆ ಪಡೆದುದರ ಕುರಿತು ಸಾಕ್ಷಿ ನುಡಿದರು. ರಸೀದಿಯಲ್ಲಿ ಉಡುಪಿಯ ಐ ಮೊಬೈಲ್‌ ಮತ್ತು ಮಣಿಪಾಲ್‌ನ ಸಿಟಿ ಪಾಯಿಂಟ್‌ ಮೊಬೈಲ್‌ ಅಂಗಡಿಯಲ್ಲಿ ಮೊಬೈಲ್‌ ಖರೀದಿಯ ಮೂಲ ರಸೀದಿ ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು.

ಅಲ್ಲದೇ, 2018ರ ಜುಲೈ 21ರಂದು ಹುಬ್ಬಳ್ಳಿಯಲ್ಲಿ ಆರೋಪಿಗಳಾದ ಅಮಿತ್‌ ಬಡ್ಡಿ ಮತ್ತು ಗಣೇಶ್‌ ಮಿಸ್ಕಿನ್‌ ಅವರನ್ನು ನೇಕಾರ ಕಾಲೊನಿಯಲ್ಲಿ ಬಂಧಿಸಿ, ಪೊಲೀಸ್‌ ಠಾಣೆಯಲ್ಲಿ ಹಾಜರುಪಡಿಸಿ ಬಳಿಕ ಅವರನ್ನು ಬೆಂಗಳೂರಿಗೆ ಕರೆತಂದ ಬಗ್ಗೆ ಸಾಕ್ಷಿ ನುಡಿದರು.

ಪ್ರಾಸಿಕ್ಯೂಷನ್‌ 64ನೇ ಸಾಕ್ಷಿ ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ ವಿ ಮುಕುಂದ ಅವರು 2018ರ ಜೂನ್‌ 7ರಂದು ಪೊಲೀಸರಿಗೆ ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷಿ ನುಡಿದರು. ಜೂನ್‌ 7ರಂದು ಸಿಐಡಿ ಕಚೇರಿಯಲ್ಲಿ ಆರೋಪಿ ಸುಜಿತ್‌ ಕುಮಾರ್‌ ಅವರ ಧ್ವನಿ ಮಾದರಿ ಮತ್ತು ಸುಜಿತ್‌ ಹಾಗೂ ಇನ್ನೊಬ್ಬ ಆರೋಪಿ ಮನೋಹರ್‌ ಕೈಬರಹದ ಮಾದರಿಗಳ ಕುರಿತು ಸಾಕ್ಷ್ಯ ನುಡಿದರು.

ಮತ್ತೊಬ್ಬರು ಸಾಕ್ಷಿಯಾಗಿರುವ ಬೆಂಗಳೂರು ಉತ್ತರ ತಾಲ್ಲೂಕಿನ ಕಡುಬಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಅವರು ಮೊದಲ ಬಾರಿ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಹಾಜರುಪಡಿಸಿದ ಆರೋಪಿಗಳ ಪೈಕಿ ಅಮೋಲ್‌ ಕಾಳೆಯನ್ನು ಗುರುತಿಸಿದರು. ಆರೋಪಿ ಸುರೇಶ್‌ ಗುರುತಿಸಲು ಕಷ್ಟವಾಗಿ ಖುದ್ದು ನೋಡಿದಲ್ಲಿ ಆರೋಪಿಯನ್ನು ಗುರುತಿಸಲಾಗುವುದು ಎಂದರು. ಈ ಹಂತದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಸ್‌ ಬಾಲಕೃಷ್ಣನ್‌ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಎಲ್ಲಾ ಆರೋಪಿಗಳನ್ನು ನ್ಯಾಯಾಲಯದಲ್ಲಿ ಖುದ್ದು ಹಾಜರುಪಡಿಸಲು ಆದೇಶಿಸುವಂತೆ ಕೋರಿದರು. ಸದರಿ ಕೋರಿಕೆಯ ಕಾರಣ ಪ್ರವೀಣ್‌ ಕುಮಾರ್‌ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಲಾಗಿದೆ.