ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಮತ್ತು ಕಾರ್ಮಿಕ ಮುಖಂಡರಾಗಿದ್ದ ಕೆ ಸುಬ್ಬರಾವ್ (92) ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಪತ್ನಿ ಸುಶೀಲಾರಾವ್ ಮತ್ತು ಅಮೆರಿಕದಲ್ಲಿರುವ ಪುತ್ರಿ ಮಾಯಾರಾವ್ ಅವರನ್ನು ಶ್ರೀಯುತರು ಅಗಲಿದ್ದು, ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಹೆಬ್ಬಾಳದ ಚಿತಾಗಾರದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಮಣಿಲ ಗ್ರಾಮದಲ್ಲಿ 1931ರ ಜೂನ್ 15ರಂದು ಸುಬ್ಬರಾವ್ ಅವರು ಜನಿಸಿದ್ದರು. ತಂದೆ ಕಡಂದೇಲು ಗಣೇಶ್‌ರಾವ್ ಮತ್ತು ತಾಯಿ ಕಡಂದೇಲು ಸರಸ್ವತಿ. ಸ್ವಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಗಡಿಯಲ್ಲಿರುವ ನಿಲೇಶ್ವರದಲ್ಲಿ ಪ್ರೌಢಶಾಲೆ ನಂತರ ಮಂಗಳೂರು, ಮದ್ರಾಸ್‌ನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪೂರೈಸಿ ಪೂನಾದಲ್ಲಿ ಕಾನೂನು ಪದವಿ ಪಡೆದಿದ್ದರು.
1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ್ದ ಅವರು ಆ ಸಮಯದಲ್ಲಿ ಬಂಧನಕ್ಕೊಳಗಾದ ಹೋರಾಟಗಾರರ ಮಾಹಿತಿಯೇ ಲಭ್ಯವಿರದಿದ್ದಾಗ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುವ ಮೂಲಕ ಹೋರಾಟಗಾರರ ಪ್ರಾಣಮಿತ್ರ ಎನಿಸಿದ್ದರು.
ಕಾರ್ಮಿಕ ಮತ್ತು ಸೇವಾ ವಲಯದಲ್ಲಿಯೇ ಹೆಚ್ಚಿನ ಪ್ರಕರಣ ಕೈಗೆತ್ತಿಕೊಂಡು ಬದುಕಿನುದ್ದಕ್ಕೂ ಕಾರ್ಮಿಕರ ಹಿತಕ್ಕೆ ಬದ್ಧರಾಗಿ ಲಕ್ಷಾಂತರ ಕಾರ್ಮಿಕರ ಹಕ್ಕುಗಳು, ಬದುಕನ್ನು ನ್ಯಾಯಾಲಯದ ಒಳಗೂ, ಹೊರಗೂ ರಕ್ಷಿಸಲು ಹೋರಾಡಿದ ವಕೀಲರಾಗಿದ್ದರು.
1964ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಕಾರ್ಮಿಕರ ಸಂಘದ ಕಾನೂನು ಸಲಹೆಗಾರರಾಗಿ, ನಂತರ ಎಚ್ ಎಂ ಟಿ, ಬಿ ಇ ಎಲ್, ಎಚ್ ಎ ಎಲ್, ಐ ಟಿ ಐನಂತಹ ಬೃಹತ್ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದರು. ಇಂಡಿಯನ್ ಕಾಫಿ ವರ್ಕರ್ಸ್ ಕೋ-ಆಪರೇಟಿವ್ ಯೂನಿಯನ್, ಮೈಸೂರು ಕಮರ್ಷಿಯಲ್ ಎಂಪ್ಲಾಯಿಸ್ ಯೂನಿಯನ್, ಬಿನ್ನಿ ಮಿಲ್ ಕಾರ್ಮಿಕರ ಸಂಘ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು.
1986ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕಾನೂನು ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಸೇರಿದಂತೆ ಅನೇಕ ನ್ಯಾಯಮೂರ್ತಿಗಳು ಹಾಗೂ ಅಪಾರ ಸಂಖ್ಯೆಯ ವಕೀಲರು ಇವರ ಗರಡಿಯಲ್ಲಿ ಪಳಗಿದ್ದಾರೆ.