Madras High Court

 
ಸುದ್ದಿಗಳು

ಕೇವಲ ಶೇ.10ರಷ್ಟು ಪೊಲೀಸರು ಮಾತ್ರ ದಕ್ಷರು, ಪ್ರಾಮಾಣಿಕರು: ಮದ್ರಾಸ್‌ ಹೈಕೋರ್ಟ್‌

ದುರದೃಷ್ಟವಶಾತ್ ಇಂದಿನ ದಿನಮಾನದಲ್ಲಿ ಪೊಲೀಸ್‌ ಇಲಾಖೆಯು ಶೇ.90ರಷ್ಟು ಭ್ರಷ್ಟ ಹಾಗೂ ತನಿಖಾ ಸಾಮರ್ಥ್ಯವಿಲ್ಲದ ಅಧಿಕಾರಿಗಳಿಂದಲೇ ತುಂಬಿದೆ ಎಂದ ನ್ಯಾಯಪೀಠ.

Bar & Bench

ತಮಿಳುನಾಡು ಪೊಲೀಸರ ಪ್ರಾಮಾಣಿಕತೆಯ ಬಗ್ಗೆ ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿಸಬೇಕಾದ ಅಗತ್ಯವನ್ನು ಹಾಗೂ ಭ್ರಷ್ಟರನ್ನು ನಿರ್ಮೂಲನೆಗೊಳಿಸಬೇಕಾದ ಅಗತ್ಯತೆಯ ಬಗ್ಗೆ ನ್ಯಾಯಾಲಯ ಒತ್ತಿ ಹೇಳಿದೆ [ಎಸ್‌ ವಾಸಂತಿ ವರ್ಸಸ್‌ ಭಾಗ್ಯಲಕ್ಷ್ಮಿ].

ಹೈಕೋರ್ಟ್‌ ಆದೇಶವನ್ನು ಪಾಲಿಸದ ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಿಲೇವಾರಿ ಮಾಡುವ ವೇಳೆ ನ್ಯಾ. ಪಿ ವೇಲಮುರುಗನ್ ಅವರು ತಮಿಳುನಾಡು ಪೊಲೀಸ್‌ ವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

"ದುರದೃಷ್ಟವಶಾತ್ ಇಂದಿನ ದಿನಮಾನದಲ್ಲಿ ಪೊಲೀಸ್‌ ಇಲಾಖೆಯು ಶೇ.90ರಷ್ಟು ಭ್ರಷ್ಟ ಹಾಗೂ ತನಿಖಾ ಸಾಮರ್ಥ್ಯವಿಲ್ಲದ ಅಧಿಕಾರಿಗಳಿಂದಲೇ ತುಂಬಿದೆ. ಕೇವಲ ಶೇ.10ರಷ್ಟು ಅಧಿಕಾರಿಗಳು ಮಾತ್ರವೇ ಪ್ರಾಮಾಣಿಕರು, ತನಿಖಾ ಸಾಮರ್ಥ್ಯವುಳ್ಳವರು ಆಗಿದ್ದಾರೆ. ಈ ಶೇ.10ರಷ್ಟು ಅಧಿಕಾರಿಗಳೇ ಎಲ್ಲ ತನಿಖೆಯನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ಸಮಯ ಬಂದಿದ್ದು, ಭ್ರಷ್ಟರನ್ನು ಮೂಲೋತ್ಪಾಟನೆ ಮಾಡಬೇಕಿದೆ" ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.