Supreme Court, TN Minister Senthil Balaji 
ಸುದ್ದಿಗಳು

ಸಚಿವ ಸೆಂಥಿಲ್ ಪ್ರಕರಣ: ಮದ್ರಾಸ್ ಹೈಕೋರ್ಟ್ ತೀರ್ಪಿನತ್ತ ಸುಪ್ರೀಂ ಚಿತ್ತ; ಇ ಡಿ ಅರ್ಜಿ ವಿಚಾರಣೆ ಮುಂದೂಡಿಕೆ

ಸ್ಥಾಪಿತ ಕಾನೂನು ತತ್ವ ಅಥವಾ ಶಾಸನಾತ್ಮಕ ನಿಯಮಾವಳಿಗಳನ್ನು ಸೋಲಿಸುವ ಆದೇಶ (ಹೈಕೋರ್ಟ್‌ನಿಂದ) ಬಂದಲ್ಲಿ ತಾನು ಪ್ರಕರಣ ಆಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮೌಖಿಕ ಭರವಸೆ ನೀಡಿತು.

Bar & Bench

ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಪತ್ನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಪುರಸ್ಕರಿಸುವಲ್ಲಿ ಮದ್ರಾಸ್ ಹೈಕೋರ್ಟ್ ಎಡವಿದೆ ಎಂದು ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದೂಡಿದೆ.

ಅರ್ಜಿಯ ನಿರ್ವಹಣೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಹೈಕೋರ್ಟ್ ಇನ್ನೂ ತನ್ನ ಅಭಿಪ್ರಾಯ ನೀಡಿಲ್ಲ. ಹೀಗಾಗಿ ತಾನು ಹೈಕೋರ್ಟ್‌ ಆದೇಶಕ್ಕಾಗಿ ಕಾಯುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ರಜಾಕಾಲೀನ ಪೀಠ ತಿಳಿಸಿದೆ.

"ಈ ಎರಡೂ ಪ್ರಕರಣಗಳನ್ನು ನಾಳೆ ಅಥವಾ ನಂತರ ಹೈಕೋರ್ಟ್ ಪರಿಶೀಲಿಸುವ ಸಾಧ್ಯತೆಯಿರುವುದರಿಂದ.. ವಿಶೇಷ ಅನುಮತಿ ಅರ್ಜಿಯನ್ನು (ಎಸ್‌ಎಲ್‌ಪಿ) ಮುಂದಿನ ವಿಚಾರಣೆ  ದಿನಕ್ಕೆ ಮುಂದೂಡುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ಹೈಕೋರ್ಟ್ ಅರ್ಹತೆ ಆಧಾರದ ಮೇಲೆ ವಿಷಯ ಮುಂದುವರೆಸಬೇಕು" ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಸ್ಥಾಪಿತ ಕಾನೂನು ತತ್ವ ಅಥವಾ ಶಾಸನಾತ್ಮಕ ನಿಯಮಾವಳಿಗಳನ್ನು ಸೋಲಿಸುವ ಆದೇಶ (ಹೈಕೋರ್ಟ್‌ನಿಂದ) ಬಂದಲ್ಲಿ ತಾನು ಪ್ರಕರಣ ಆಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮೌಖಿಕ ಭರವಸೆ ನೀಡಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸೆಂಥಿಲ್ ಬಾಲಾಜಿ ಅವರನ್ನು ಬೈಪಾಸ್ ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿತು.

ಸೆಷನ್ಸ್ ನ್ಯಾಯಾಲಯ ಸಚಿವರನ್ನು ಬಂಧಿಸುವ ಆದೇಶ ನೀಡುತ್ತಿದ್ದಂತೆ ಬಾಲಾಜಿ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಇ ಡಿ ಹೇಳಿದೆ. ಇಂದು ನಡೆದ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿ, ಹೈಕೋರ್ಟ್‌ನ ತರ್ಕ ಸಾಂವಿಧಾನಿಕ ಪೀಠದ ಮೂರು ತೀರ್ಪುಗಳಿಗೆ ವಿರುದ್ಧವಾಗಿದೆ ಎಂದರು.

"ವ್ಯಕ್ತಿ (ಸಚಿವರು) ಖುದ್ದು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಇತ್ಯಾದಿಗಳಿಗೆ ಒಳಗಾಗಿದ್ದಾರೆ. ನಾನು ಷರತ್ತುಬದ್ಧವಾಗಿರುವ ಬಂಧನ ಆದೇಶವನ್ನು ಪ್ರಶ್ನಿಸುತ್ತಿದ್ದು ಇದು ವಾಸ್ತವಿಕವಾಗಿ ಬಂಧನವನ್ನು ಅರ್ಥಹೀನಗೊಳಿಸುತ್ತದೆ" ಎಂದು ಎಸ್‌ಜಿ ವಿವರಿಸಿದರು