KSBC election 
ಸುದ್ದಿಗಳು

ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮತಪತ್ರ: ಕೆಎಸ್‌ಬಿಸಿ ಚುನಾವಣೆ ತಡೆಗೆ ಹೈಕೋರ್ಟ್‌ ನಕಾರ: ಬಿಸಿಐಗೆ ನೋಟಿಸ್‌

ಪುರುಷರು-ಮಹಿಳೆಯರು ಸೇರಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ. ಇಷ್ಟೊಂದು ಅಭ್ಯರ್ಥಿಗಳ ನಡುವೆ ಮಹಿಳಾ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟವಾಗುತ್ತದೆ ಎಂದು ವಾದಿಸಿದ ವಕೀಲೆ ಸಂಧ್ಯಾ ಪ್ರಭು.

Bar & Bench

ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ಮಾರ್ಚ್ 11ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಿಳಾ ಮೀಸಲು ಕೋಟಾದಡಿ ಸ್ಪರ್ಧಿಸುವ ಮಹಿಳಾ ಅಭ್ಯರ್ಥಿಗಳನ್ನು ಪ್ರತ್ಯೇಕ ವರ್ಗ ಎಂದು ಗುರುತಿಸಿ ಮತದಾನಕ್ಕೆ ಪ್ರತ್ಯೇಕ ಮತಪತ್ರ (ಬ್ಯಾಲೆಟ್ ಪೇಪರ್) ವ್ಯವಸ್ಥೆ ಮಾಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮತ್ತು ಕೆಎಸ್‌ಬಿಸಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ ಚುನಾವಣೆಗೆ ತಡೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ.

ಚುನಾವಣೆಯಲ್ಲಿ ಸ್ಪರ್ಧಾ ಆಕಾಂಕ್ಷಿಯಾಗಿರುವ ವಕೀಲೆ ಸಂಧ್ಯಾ ಪ್ರಭು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice B M Shyam Prasad

ವಾದ ಆಲಿಸಿದ ಪೀಠವು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಭಾರತೀಯ ವಕೀಲರ ಪರಿಷತ್ತು ಹಾಗೂ ಪರಿಷತ್ತಿನ ಚುನಾವಣೆಯ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಷಯದ ಬಗ್ಗೆ ನಿಲುವು ತಿಳಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.

ಅಲ್ಲದೇ ಚುನಾವಣಾ ಪ್ರಕ್ರಿಯೆ ಸಂಬಂಧ 2026ರ ಜನವರಿ 5ರಂದು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಗೆ ನಿರಾಕರಿಸಿದ ನ್ಯಾಯಾಲಯ, ಈ ಹಂತದಲ್ಲಿ ಚುನಾವಣೆಗೆ ತಡೆ ನೀಡುವುದಿಲ್ಲ ಎಂದು ಸ್ಪಷ್ಡಪಡಿಸಿತು. ಅಲ್ಲದೇ, ಪ್ರತ್ಯೇಕ ಮತಪತ್ರಕ್ಕೆ ಸಂಬಂಧಿಸಿದಂತೆ ಕೆಎಸ್‌ಬಿಸಿಗೆ ಅರ್ಜಿದಾರರು ಮನವಿ ಸಲ್ಲಿಸಬಹುದು ಎಂದು ಹೇಳಿದೆ.

ವಕೀಲೆ ಸಂಧ್ಯಾ ಪ್ರಭು ಅವರು “ರಾಜ್ಯ ವಕೀಲರ ಪರಿಷತ್ತಿಗೆ 18 ಮಂದಿಯ ಆಯ್ಕೆಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಮಹಿಳೆಯರಿಗೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಈ ಪೈಕಿ 2 ಸ್ಥಾನಗಳಿಗೆ ಬಿಸಿಐ ನೇರವಾಗಿ ನೇಮಕ ಮಾಡಲಿದೆ. ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪುರುಷರು-ಮಹಿಳೆಯರು ಸೇರಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ. ಇಷ್ಟೊಂದು ಅಭ್ಯರ್ಥಿಗಳ ನಡುವೆ ಮಹಿಳಾ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟವಾಗುತ್ತದೆ. ಆದ್ದರಿಂದ, ಮಹಿಳಾ ಮೀಸಲಾತಿ ಕೋಟಾದಡಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವರ್ಗ ನಿಗದಿಪಡಿಸಿ ಮತದಾನಕ್ಕೆ ಪ್ರತ್ಯೇಕ ಮತಪತ್ರ ವ್ಯವಸ್ಥೆ ಮಾಡಲು ನಿರ್ದೇಶನ ನೀಡಬೇಕು” ಎಂದು ಕೋರಿದರು.