ಕೃಷ್ಣಾ- ಗೋದಾವರಿ ಕಣಿವೆ ಪ್ರದೇಶ ಅನಿಲ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಾದ ತಿರಸ್ಕರಿಸಿದ್ದ ಮಧ್ಯಸ್ಥಿಕೆ ತೀರ್ಪನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ (ಆರ್‌ಐಎಲ್) ಹಿನ್ನಡೆಯಾಗಿದೆ.
ಏಕಸದಸ್ಯ ಪೀಠವು ಮೇ 9, 2023 ರಂದು ನೀಡಿದ ಆದೇಶ ಮತ್ತು 2018ರಲ್ಲಿ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದ್ದ ತೀರ್ಪು ಹಾಗೂ ಅದಕ್ಕೆ ಸಂಬಂಧಿಸಿದ ಬಾಕಿ ಇರುವ ಅರ್ಜಿಗಳು ಇತ್ಯರ್ಥಗೊಂಡ ಕಾನೂನಿಗೆ ವಿರುದ್ಧವಾಗಿರುವುದನ್ನು ನ್ಯಾಯಮೂರ್ತಿಗಳಾದ ರೇಖಾ ಪಲ್ಲಿ ಮತ್ತು ಸೌರಭ್ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಪ್ರಸ್ತಾಪಿಸಿದೆ.
ಏಪ್ರಿಲ್ 2000 ರಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನೇತೃತ್ವದ ಒಕ್ಕೂಟವು ಆಂಧ್ರಪ್ರದೇಶದ ಕರಾವಳಿಯ ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಿಂದ ನೈಸರ್ಗಿಕ ಅನಿಲದ ಪರಿಶೋಧನೆ ಮತ್ತು ಹೊರತೆಗೆಯುವಿಕೆಗಾಗಿ ಕೇಂದ್ರ ಸರ್ಕಾರದೊಂದಿಗೆ ಉತ್ಪಾದನಾ ಹಂಚಿಕೆ ಒಪ್ಪಂದ ಮಾಡಿಕೊಂಡಿತ್ತು. ಪಕ್ಷಕಾರರ ನಡುವಿನ ಹಕ್ಕುಗಳು, ಬಾಧ್ಯತೆಗಳು ಮತ್ತು ಆದಾಯ ಹಂಚಿಕೆ ನಿಯಮಗಳನ್ನು ಒಪ್ಪಂದದಲ್ಲಿ ವಿವರಿಸಲಾಗಿತ್ತು.
ತನಗೆ ಹಂಚಲಾದ ಅನಿಲ ನಿಕ್ಷೇಪದಿಂದ ರಿಲಯನ್ಸ್ ಅನಿಲ ಉತ್ಪಾದನಾ ಪ್ರದೇಶಕ್ಕೆ ನೈಸರ್ಗಿಕ ಅನಿಲ ನಿರಂತರವಾಗಿ ರವಾನೆಯಾಗಿರುವುದನ್ನು ಪ್ರಶ್ನಿಸಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಹೈಡ್ರೋಕಾರ್ಬನ್ಸ್ ಮಹಾನಿರ್ದೇಶನಾಲಯಕ್ಕೆ ವರದಿ ಮಾಡಿತ್ತು. ಆ ಮೂಲಕ ವಿವಾದ ತಲೆಎತ್ತಿತ್ತು.
ತನ್ನ ನಿಕ್ಷೇಪದಿಂದ ಅನಿಲವನ್ನು ಅಕ್ರಮವಾಗಿ ಪಡೆದು ರಿಲಯನ್ಸ್ ಅನ್ಯಾಯದ ಲಾಭ ಮಾಡಿಕೊಂಡಿದೆ ಎಂದು ಒಎನ್‌ಜಿಸಿ ದೂರಿದ್ದ ಹಿನ್ನೆಲೆಯಲ್ಲಿ ರಿಲಯನ್ಸ್ ಮತ್ತು ಅದರ ಪಾಲುದಾರರು 1.5 ಶತಕೋಟಿ ಡಾಲರ್ ಮತ್ತು ಹೆಚ್ಚುವರಿ 174 ದಶಲಕ್ಷ ಡಾಲರ್ ಬಡ್ಡಿ ತೆರುವಂತೆ ಸೂಚಿಸಿತ್ತು.
ಆದರೆ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಅಂತಿಮ ತೀರ್ಪು ನೀಡಿದ್ದ ಮಧ್ಯಸ್ಥಿಕೆ ನ್ಯಾಯಮಂಡಳಿ ರಿಲಯನ್ಸ್ ಪರವಾಗಿ ತೀರ್ಪು ನೀಡಿತ್ತು. ಆ ಮೂಲಕ ಸುದೀರ್ಘ ಕಾಲದ ಕಾನೂನು ಹೋರಾಟದಲ್ಲಿ ರಿಲಯನ್ಸ್‌ಗೆ ಜಯ ಸಂದಿತ್ತು. ಮೇ 2023ರಲ್ಲಿ ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠ ಕೂಡ ಮಧ್ಯಸ್ಥಿಕೆ ತೀರ್ಪನ್ನು ಎತ್ತಿ ಹಿಡಿಯಿತು. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್ 37 ರ ಅಡಿಯಲ್ಲಿ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು.
ಕೇಂದ್ರ ಸರ್ಕಾರವನ್ನು ಭಾರತದ ಅಟಾರ್ನಿ ಜನರಲ್ (ಎಜಿಐ) ಆರ್ ವೆಂಕಟರಮಣಿ, ಹಿರಿಯ ವಕೀಲರಾದ ಕೆಕೆ ವೇಣುಗೋಪಾಲ್ ಹಾಗೂ ಗೋಪಾಲ್ ಜೈನ್ ಪ್ರತಿನಿಧಿಸಿದ್ದರು . ಆರ್‌ಐಎಲ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು .