Supreme Court Justice Sanjay Kishan Kaul
Supreme Court Justice Sanjay Kishan Kaul 
ಸುದ್ದಿಗಳು

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 2.06 ಕೋಟಿ ಪ್ರಕರಣಗಳು ಇತ್ಯರ್ಥ: ಸುಪ್ರೀಂ ಕೋರ್ಟ್ ನ್ಯಾ. ಸಂಜಯ್ ಕೌಲ್

Bar & Bench

“ಪ್ರಸಕ್ತ ವರ್ಷದಲ್ಲಿ ನಡೆದಿರುವ ಪ್ರಥಮ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 30.57 ಲಕ್ಷ ಬಾಕಿ ಪ್ರಕರಣಗಳು ಮತ್ತು 1.76 ಕೋಟಿ ದಾವೆ ಪೂರ್ವ ಪ್ರಕರಣಗಳು ಸೇರಿ ಒಟ್ಟು 2,06,57,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಲ್ಲದೇ, 3.88 ಲಕ್ಷ ಕಾನೂನು ಅರಿವು ಕಾರ್ಯಕ್ರಮ/ಕ್ಯಾಂಪ್‌ ಸಂಘಟಿಸಲಾಗಿದ್ದು, ಇದರಿಂದ 5.7 ಕೋಟಿ ಜನರಿಗೆ ಅನುಕೂಲವಾಗಿದೆ” ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ಅಧ್ಯಕ್ಷರು ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಎನ್‌ಎಎಲ್‌ಎಸ್‌ಎ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ದಕ್ಷಿಣ ವಲಯ ಪ್ರಾದೇಶಿಕ ಸಮಾವೇಶದ ಭಾಗವಾಗಿ ನಡೆದ ʼʼಸುಗಮ ನ್ಯಾಯದಾನದ ವರ್ಧನೆ" (ಎನ್‌ಹೆನ್ಸಿಂಗ್‌ ಆಕ್ಸಸ್‌ ಟು ಜಸ್ಟೀಸ್‌) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

“ವಾಣಿಜ್ಯ ಪ್ರಕರಣಗಳ ರಾಜೀ ಪ್ರಕರಣಗಳು ಹೆಚ್ಚಳವಾಗಿವೆ. ಹೀಗಾಗಿ, ಮಧ್ಯಸ್ಥಿಕೆದಾರರಿಗೆ ತರಬೇತಿಗೆ ಹೆಚ್ಚು ಆದ್ಯತೆ ನೀಡಬೇಕಿದೆ” ಎಂದು ಅವರು ಈ ವೇಳೆ ಹೇಳಿದರು.

ವಿಶೇಷ ಅತಿಥಿಯಾಗಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಾಗೂ ಸಲಹಾ ಸಮಿತಿಯ ಸದಸ್ಯರಾದ ನ್ಯಾ. ಸಂಜೀವ್‌ ಖನ್ನಾ ಅವರು ಕ್ರಿಮಿನಲ್‌ ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಪ್ರಕ್ರಿಯಾತ್ಮಕ ಹಕ್ಕುಗಳ ಮಹತ್ವದ ಬಗ್ಗೆ ವಿವರಿಸಿದರು.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ಯಾಟ್ರನ್‌ ಇನ್‌ ಚೀಫ್‌ ಆದ ನ್ಯಾ. ಪ್ರಸನ್ನ ಬಾಲಚಂದ್ರ ವರಾಳೆ ಅವರು “ನ್ಯಾಯದಾನ ಪಡೆಯುವ ನಿಟ್ಟಿನಲ್ಲಿ ಸ್ಥಳೀಯ ಸಮುದಾಯಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ನ್ಯಾಯದಾನದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ನ್ಯಾಯದಾನವು ಕೆಲವೇ ಕೆಲವರ ಆಡೊಂಬಲವಲ್ಲ, ಇದು ಎಲ್ಲರ ಮೂಲಭೂತ ಹಕ್ಕು. ಈ ನಿಟ್ಟಿನಲ್ಲಿ ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರಾದ ನ್ಯಾ. ಬಿ ವೀರಪ್ಪ ಅವರು ಮೇಲಿಂದ ಮೇಲೆ ತಪಾಸಣೆಯ ಭಾಗವಾಗಿ ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಜೈಲಿಗೆ ಭೇಟಿ ನೀಡುತ್ತಿರುವುದು ಶ್ಲಾಘನೀಯ” ಎಂದರು.

ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷ ನ್ಯಾ. ಬಿ ವೀರಪ್ಪ, ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾ. ಕೆ ಸೋಮಶೇಖರ್‌ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಪುದುಚೆರಿ, ಕೇರಳ ಮತ್ತು ಒಡಿಶಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರು, ಹೈಕೋರ್ಟ್‌ಗಳ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು.