Karnataka High Court judges 
ಸುದ್ದಿಗಳು

ಆಗಸ್ಟ್‌ 1ರಂದು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಎಲ್ಲಾ ಮಹಿಳಾ ನ್ಯಾಯಮೂರ್ತಿಗಳಿಂದ ವಿಚಾರಣೆ

ಶನಿವಾರದಂದು ವಿಶೇಷವಾಗಿ ಎಲ್ಲಾ ಏಳು ಮಹಿಳಾ ನ್ಯಾಯಮೂರ್ತಿಗಳ ಪೀಠವು ಧಾರವಾಡದಲ್ಲಿ ವಿಚಾರಣೆ ನಡೆಸಲಿದೆ.

Bar & Bench

ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಆಗಸ್ಟ್ 1ರಂದು ಇಡೀ ದಿನದ ಕಲಾಪಗಳು ಮಹಿಳಾ ನ್ಯಾಯಮೂರ್ತಿಗಳೇ ನಡೆಸಿಕೊಡಲಿದ್ದಾರೆ. ಹೈಕೋರ್ಟ್‌ ಇತಿಹಾಸದಲ್ಲೇ ಇದು ಮೊದಲ ಪ್ರಯತ್ನ ಎನ್ನಲಾಗಿದೆ.

ಮಹಿಳಾ ಪ್ರಾತಿನಿಧ್ಯದ ಸಂಕೇತವಾಗಿ ಈ ಪ್ರಯತ್ನ ಎಂದು ಹೇಳಲಾಗಿದೆ. ಒಟ್ಟು 10 ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರು ವಿಭಾಗೀಯ ಹಾಗೂ ನಾಲ್ಕು ಏಕಸದಸ್ಯ ನ್ಯಾಪೀಠಗಳನ್ನು ರಚಿಸಿ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ಆದೇಶದಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್ (ನ್ಯಾಯಾಂಗ) ರೋಣ ವಾಸುದೇವ ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆಯಂತೆ ಧಾರವಾಡ ಹೈಕೋರ್ಟ್ ಪೀಠದಲ್ಲಿ 10 ಮಹಿಳಾ ನ್ಯಾಯಮೂರ್ತಿಗಳು ಏಳು ಪೀಠಗಳಲ್ಲಿ ಆಗಸ್ಟ್ 1ರಂದು ಇಡೀ ದಿನದ ಕಲಾಪದಲ್ಲಿ ನಿಗದಿಪಡಿಸಿದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳಾದ ಅನು ಶಿವರಾಮನ್, ಕೆ ಜಿ ಶಾಂತಿ, ಜ್ಯೋತಿ ಮೂಲಿಮನಿ, ಪಿ ಶ್ರೀಸುಧಾ, ಲಲಿತಾ ಕನ್ನೆಗಂಟಿ ಹಾಗೂ ಕೆ ಎಸ್ ಹೇಮಲೇಖಾ ಅವರ ನೇತೃತ್ವದ ಮೂರು ವಿಭಾಗೀಯ ಪೀಠಗಳು ಕಲಾಪ ನಡೆಸಲಿವೆ.

ಇದರ ಜೊತೆಗೆ ನ್ಯಾಯಮೂರ್ತಿಗಳಾದ ಚೆಲ್ಲಕೂರು ಸುಮಲತಾ, ತಾರಾ ವಿತಾಸ್ತಾ ಗಂಜು, ಕೆ ಬಿ ಗೀತಾ, ರಾಜೇಶ್ವರಿ ಎನ್. ಹೆಗ್ಡೆ ಅವರ ನೇತೃತ್ವದ ಏಕಸದಸ್ಯ ಪೀಠಗಳು ಕಲಾಪ ನಡೆಸಲಿವೆ.