High Court of Karnataka
High Court of Karnataka 
ಸುದ್ದಿಗಳು

ಕಾವೇರಿ, ಕನ್ನಿಕೆಗೆ ಒಳಚರಂಡಿ ನೀರು: ತ್ಯಾಜ್ಯ ಸ್ವಚ್ಛಗೊಳಿಸಲು 15 ದಿನ ಕಾಲಾವಕಾಶ ವಿಸ್ತರಿಸಿದ ಹೈಕೋರ್ಟ್‌

Bar & Bench

ಒಳಚರಂಡಿ ನೀರು ಹರಿವಿನಿಂದ ಕೊಡಗು ಜಿಲ್ಲೆ ಭಾಗಮಂಡಲದಲ್ಲಿ ಕಾವೇರಿ ಮತ್ತು ಕನ್ನಿಕೆ ನದಿಪಾತ್ರದಲ್ಲಿ ಮಾಲಿನ್ಯದಿಂದ ಶೇಖರಣೆಯಾಗಿರುವ ತ್ಯಾಜ್ಯ ಸ್ವಚ್ಛಗೊಳಿಸುವ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ಮತ್ತೆ 15 ದಿನಗಳ ಕಾಲಾವಕಾಶ ನೀಡಿದೆ.

ಭಾಗಮಂಡಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯಿಂದ ನದಿ ಮಾಲಿನ್ಯವಾಗುತ್ತಿದೆ ಮತ್ತು ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ಆದ್ದರಿಂದ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯ ಸ್ವಚ್ಛಗೊಳಿಸಲು ಆದೇಶಿಸುವಂತೆ ಕೋರಿ ಸ್ಥಳೀಯ ನಿವಾಸಿ ಎಸ್ ಇ ಜಯಂತ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಕಾವೇರಿ ನಿರಾವರಿ ನಿಗಮದ ಪರ ವಕೀಲರು “ಭಾಗಮಂಡಲದಲ್ಲಿ ಕಾವೇರಿ ಮತ್ತು ಕನ್ನಿಕೆ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯ ಸ್ವಚ್ಛಗೊಳಿಸುವ ಕಾರ್ಯ ನಡೆಸಲು ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ನದಿಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಕಾಮಗಾರಿ ನಿಗದಿತ ಅಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸದ್ಯ ನೀರಿನ ಪ್ರಮಾಣ ಕಡಿಮೆಯಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ 15 ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಒಪ್ಪಿದ ಪೀಠವು ಕಾಮಗಾರಿ ಪೂರ್ಣಗೊಳಿಸಲು 15 ದಿನ ಕಾವಲಾವಾಶ ನೀಡಿ ವಿಚಾರಣೆ ಮುಂದೂಡಿತು.

ಕಾವೇರಿ ಹಾಗೂ ಕನ್ನಿಕೆ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯವನ್ನು ಸ್ವಚ್ಛಗೊಳಿಸುವ ಕಾಮಗಾರಿಯನ್ನು ಎರಡು ತಿಂಗಳ ಅವಧಿಯಲ್ಲಿ (ಮಾರ್ಚ್ 24ರೊಳಗೆ) ಪೂರ್ಣಗೊಳಿಸುವಂತೆ ಕಾವೇರಿ ನಿರಾವರಿ ನಿಗಮಕ್ಕೆ 2023ರ ಫೆಬ್ರವರಿ 6ರಂದು ಹೈಕೋರ್ಟ್ ಆದೇಶಿಸಿತ್ತು.