High Court of Karnataka
High Court of Karnataka  
ಸುದ್ದಿಗಳು

ಕಾವೇರಿ, ಕನ್ನಿಕೆಗೆ ಒಳಚರಂಡಿ ನೀರು: ತ್ಯಾಜ್ಯ ತೆರವು ಮಾಡಲು ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್‌ ನಿರ್ದೇಶನ

Bar & Bench

ಒಳಚರಂಡಿ ನೀರು ಸೇರ್ಪಡೆಯಿಂದ ಕೊಡಗು ಜಿಲ್ಲೆ ಭಾಗಮಂಡಲದಲ್ಲಿ ಕಾವೇರಿ ಹಾಗೂ ಕನ್ನಿಕೆ ನದಿಪಾತ್ರದಲ್ಲಿ ಮಾಲಿನ್ಯ ಉಂಟಾಗಿದ್ದು, ತ್ಯಾಜ್ಯ ತೆರವು ಮಾಡಬೇಕು ಎಂದು ಕಾವೇರಿ ನೀರಾವರಿ ನಿಗಮಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಭಾಗಮಂಡಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯಿಂದ ನದಿ ಮಾಲಿನ್ಯವಾಗುತ್ತಿದೆ ಮತ್ತು ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿದೆ ಎಂದು ಆಕ್ಷೇಪಿಸಿ ಎಸ್ ಇ ಜಯಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು “ಕಾವೇರಿ ಮತ್ತು ಕನ್ನಿಕೆ ನದಿಗಳಲ್ಲಿ ತ್ಯಾಜ್ಯ ತೆರವುಗೊಳಿಸಿ, ಸ್ವಚ್ಛಗೊಳಿಸುವ ಕಾರ್ಯವನ್ನು ಸೂಕ್ತವಾಗಿ ಮಾಡಿಲ್ಲ. ಸದ್ಯ ಕಾವೇರಿ ಮತ್ತು ಕನ್ನಿಕೆ ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಅದನ್ನು ತಪ್ಪಿಸಬೇಕು ಹಾಗೂ ನದಿಪಾತ್ರವನ್ನು ಸ್ವಚ್ಛಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಇದಕ್ಕಾಗಿ ಒಳಚರಂಡಿ ನೀರು ಹರಿಯುತ್ತಿರುವ ಫೋಟೊಗಳನ್ನು ಪೀಠಕ್ಕೆ ಸಲ್ಲಿಸಲಾಗಿದೆ” ಎಂದರು.

ಇದನ್ನು ಪರಿಶೀಲಿಸಿದ ಪೀಠವು ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಮುಂಗಾರು ಶೀಘ್ರದಲ್ಲೇ ಆರಂಭವಾಗಲಿದೆ. ಕೂಡಲೇ ನದಿಗೆ ಒಳಚರಂಡಿ ನೀರು ಹರಿಯುವುದನ್ನು ತಪ್ಪಿಸಲು ಹಾಗೂ ನದಿಪಾತ್ರವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ಕಾವೇರಿ ಮತ್ತು ಕನ್ನಿಕೆ ನದಿಗಳ ಪುನರುಜ್ಜೀವನ ಮತ್ತು ಸ್ವಚ್ಛತಾ ಕಾರ್ಯದ ಹೊಣೆ ಹೊತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸಂಬಂಧಪಟ್ಟ ಇತರೆ ಪ್ರಾಧಿಕಾರಗಳ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನದಿಪಾತ್ರವನ್ನು ಸ್ವಚ್ಛಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜೂನ್ ಎರಡನೇ ವಾರಕ್ಕೆ ಮುಂದೂಡಿತು.