Karnataka HC and Prajwal Revanna 
ಸುದ್ದಿಗಳು

ಸಂಸದ ಪ್ರಜ್ವಲ್‌ ವಿರುದ್ಧದ ಲೈಂಗಿಕ ಪ್ರಕರಣ: ಸ್ವತಂತ್ರ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

“ಪ್ರಕರಣದ ವಿಚಾರಣೆ ನಡೆಸುವ ತುರ್ತು ಇಲ್ಲ. ಬೇಸಿಗೆ ರಜೆ ಬಳಿಕ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

Bar & Bench

ಹಾಸನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆ ತುರ್ತಿನದ್ದಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಹೇಳಿದ್ದು ಬೇಸಿಗೆ ರಜೆ ಬಳಿಕ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿದೆ.

ಬೆಂಗಳೂರಿನ ರಾಷ್ಟ್ರ ಸಮಿತಿ ಪಕ್ಷ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ರಜಾಕಾಲೀನ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

“ಪ್ರಕರಣದ ವಿಚಾರಣೆ ನಡೆಸುವ ತುರ್ತು ಇಲ್ಲ. ಬೇಸಿಗೆ ರಜೆ ಬಳಿಕ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ ಆರ್ ಮೋಹನ್ ಅವರು “ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಲವು ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ, ಸಾಕ್ಷ್ಯ ನಾಶ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು” ಎಂದು ಮನವಿ ಮಾಡಿದರು.

ಆಗ ಪೀಠವು ಪೀಠವು ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಇಲ್ಲ” ಎಂದು ಹೇಳಿ ವಿಚಾರಣೆ ಮುಂದೂಡಿತು.

ಪ್ರಕರಣದಲ್ಲಿ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಎಸ್‌ಐಟಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಹಾಸನದ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಬಿಜೆಪಿ ಮುಖಂಡ ಹಾಗೂ ವಕೀಲ ಜಿ ದೇವರಾಜೇಗೌಡರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಲೈಂಗಿಕ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ದೇಶಾದ್ಯಂತ ಸುದ್ದಿಯ ಕೇಂದ್ರಬಿಂದುವಾಗಿರುವ ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ದೂರು ನೀಡಿತ್ತು. ಈ ವೇಳೆ ಪೊಲೀಸರು ಪ್ರಕರಣ ಸಂಬಂಧ ಹಾಸನದ ಸೆನ್‌ ಠಾಣೆಯಲ್ಲಿ ಜೆಡಿಎಸ್‌-ಬಿಜೆಪಿಯ ಏಜೆಂಟ್‌ ದೂರು ನೀಡಿದ್ದು, ಇದರ ಭಾಗವಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆ 67ಎ ಮತ್ತು ಐಪಿಸಿ 171ಜಿ ಅಡಿ ಎಫ್‌ಐಆರ್‌ ದಾಖಲಾಗಿದೆ ಎಂದು ಹಿಂಬರಹ ನೀಡಿ.

ಹೊಳೆನರಸೀಪುರ ಠಾಣೆಯ ಪೊಲೀಸರು ನೀಡಿರುವ ಹಿಂಬರಹ ವಜಾ ಮಾಡಬೇಕು. ಗೃಹ ಇಲಾಖೆ, ಪೊಲೀಸ್‌ ಮಹಾನಿರ್ದೇಶಕರು, ಎಸ್‌ಐಟಿ ಮತ್ತು ಹೊಳೆನರಸೀಪುರ ಪೊಲೀಸರ ಮೂಲಕ ಏಪ್ರಿಲ್‌ 27ರಂದು ನೀಡಿರುವ ದೂರಿನ ಅನ್ವಯ ಸ್ವತಂತ್ರ ಸಂಸ್ಥೆಯ ಮೂಲಕ ಗಂಭೀರವಾಗಿ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.

ಪ್ರಕರಣ ದಾಖಲಾಗಿ ಹಲವು ದಿನಗಳಾಗಿದ್ದು, ಆರೋಪಿ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಸುಳಿವು ದೊರೆತಿಲ್ಲ. ನೂರಾರು ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಜ್ವಲ್‌ ಎಲ್ಲಿದ್ದಾರೆ ಎಂಬುದನ್ನು ಹುಡುಕುವ ಯತ್ನವನ್ನು ಪೊಲೀಸರು ಮಾಡಿಲ್ಲ. ಹೀಗಾಗಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವತಂತ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು. ನಿರ್ದಿಷ್ಟ ಸಮಯದೊಳಗೆ ನ್ಯಾಯಸಮ್ಮತವಾಗಿ ಪ್ರಕರಣದ ತನಿಖೆ ನಡೆಸಬೇಕು ಆರೋಪಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಕೋರಲಾಗಿದೆ.