Bombay High Court, Nagpur Bench 
ಸುದ್ದಿಗಳು

ಅಪ್ರಾಪ್ತ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯೂ ಅತ್ಯಾಚಾರ; ವೈವಾಹಿಕ ವಿನಾಯಿತಿ ಅನ್ವಯಿಸದು: ಬಾಂಬೆ ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯವು ಪತಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿರುವುದನ್ನು ನ್ಯಾಯಮೂರ್ತಿ ಜಿ ಎ ಸನಪ್‌ ಅವರ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ.

Bar & Bench

ಪುರುಷ ಮತ್ತು ಆತನ 18 ವರ್ಷದೊಳಗಿನ ಪತ್ನಿಯ ನಡುವಿನ ಲೈಂಗಿಕ ಸಂಭೋಗವು ಸಮ್ಮತಿಯಿಂದ ನಡೆದಿದ್ದರೂ ಅದು ಅತ್ಯಾಚಾರವಾಗುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಈಚೆಗೆ ಆದೇಶಿಸಿದೆ.

ವಿಚಾರಣಾಧೀನ ನ್ಯಾಯಾಲಯವು ಪತಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿರುವುದನ್ನು ನ್ಯಾಯಮೂರ್ತಿ ಜಿ ಎ ಸನಪ್‌ ಅವರ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ.

“ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಸಂತ್ರಸ್ತ ಪತ್ನಿಯ ಜೊತೆಗಿನ ಮೇಲ್ಮನವಿದಾರನ ಸಂಭೋಗವನ್ನು ಲೈಂಗಿಕ ದೌರ್ಜನ್ಯವಾಗಲಿ ಅಥವಾ ಅತ್ಯಾಚಾರವಾಗಲಿ ಅಲ್ಲ ಎನ್ನುವುದನ್ನು ಒಪ್ಪಲಾಗದು. 18 ವರ್ಷಕ್ಕಿಂತ ಕೆಳಗಿನ ಬಾಲಕಿಯು ವಿವಾಹಿತೆಯಾಗಿರಲಿ, ಇಲ್ಲದಿರಲಿ ಆಕೆಯೊಂದಿಗಿನ ಸಂಭೋಗವು ಅತ್ಯಾಚಾರವೇ… ಪತ್ನಿಯ ಅಥವಾ ಪತ್ನಿಯೆಂದು ಹೇಳಲಾದ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದರೆ ಅಂತಹ ಪ್ರಕರಣಗಳಲ್ಲಿ ಪತ್ನಿಯೊಂದಿಗಿನ ಸಮ್ಮತಿಯ ಲೈಂಗಿಕತೆಯ ರಕ್ಷಣೆ ಲಭ್ಯವಾಗದು” ಎಂದು ಪೀಠ ಹೇಳಿದೆ.

ಇಂಡಿಪೆಂಡೆಂಟ್‌ ಥಾಟ್ಸ್‌ ವರ್ಸಸ್‌ ಭಾರತ ಒಕ್ಕೂಟ ಮತ್ತು ಇನ್ನೊಬ್ಬರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಹದಿನೆಂಟು ವರ್ಷದೊಳಗಿನ ಪತ್ನಿಯೊಂದಿಗಿನ ಸಂಭೋಗವು ಐಪಿಸಿ ಸೆಕ್ಷನ್‌ನ ವೈವಾಹಿಕ ಅತ್ಯಾಚಾರದ ವಿನಾಯಿತಿಗೆ ಒಳಪಡದು ಎನ್ನುವ ತೀರ್ಪಿಗೆ ಬಾಂಬೆ ಹೈಕೋರ್ಟ್‌ ಸಹಮತಿಸಿತು.

ಪ್ರಸಕ್ತ ಪ್ರಕರಣವು 2019ರಲ್ಲಿ ನಡೆದಿದ್ದು, ಅಪ್ರಾಪ್ತ ಬಾಲಕಿಯು ಆರೋಪಿಯನ್ನು ಮೂರು ವರ್ಷಗಳ ಕಾಲ ಪ್ರೀತಿಸಿದ್ದಳು. ಸಂಬಂಧ ಆರಂಭವಾದಾಗ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಬಾಲಕಿಯು ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಆನಂತರ ವಾರ್ಧಾದಲ್ಲಿ ಕೊಠಡಿಯೊಂದನ್ನು ಆಕೆ ಬಾಡಿಗೆಗೆ ಪಡೆದಿದ್ದು, ಅಲ್ಲಿಗೆ ಆರೋಪಿ ಭೇಟಿ ನೀಡುತ್ತಿದ್ದ.

ಆರಂಭದಲ್ಲಿ ದೈಹಿಕ ಸಂಬಂಧಕ್ಕೆ ಆಕೆ ವಿರೋಧಿಸಿದರೂ ಮದುವೆಯ ಭರವಸೆಯ ಹಿನ್ನೆಲೆಯಲ್ಲಿ ಒಪ್ಪಿದ್ದಳು. ಆಕೆ ಗರ್ಭಿಣಿಯಾದಾಗ ಸಮಸ್ಯೆ ಮತ್ತೊಂದು ಸ್ವರೂಪ ಪಡೆದಿತ್ತು. ಸಂತ್ರಸ್ತೆ ಮದುವೆಗೆ ಒತ್ತಡ ಹೇರಲು ಆರಂಭಿಸಿದ್ದರಿಂದ ಆರೋಪಿಯು ಕೆಲವು ನೆರೆಹೊರೆಯ ಸಮ್ಮುಖದಲ್ಲಿ ಬಾಡಿಗೆ ಕೊಠಡಿಯಲ್ಲಿಯೇ ಸರಳವಾಗಿ ಮದುವೆ ಮಾಡಿಕೊಂಡಿದ್ದ. ಯಾವುದೇ ಸಂಪ್ರದಾಯವಿಲ್ಲದೇ ವಿವಾಹ ನಡೆದಿರುವುದರಿಂದ ಈ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಸಂತ್ರಸ್ತೆಯು ನಂತರ ಆಕ್ಷೇಪಿಸಿದ್ದಳು.

ಮದುವೆಯ ಈ ನಾಟಕದ ನಂತರ ಆರೋಪಿಯು ಸಂತ್ರಸ್ತೆಯು ಗರ್ಭಪಾತ ಮಾಡಿಸಿಕೊಳ್ಳುವಂತೆ ಮನವೊಲಿಸಲು ಮುಂದಾಗಿದ್ದ. ಅಂತಿಮವಾಗಿ ಆಕೆ ನೀಡಿದ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು