Suraj Revanna and Bengaluru's city civil court 
ಸುದ್ದಿಗಳು

ಸ್ವಪಕ್ಷದ ಇಬ್ಬರಿಗೆ ಲೈಂಗಿಕ ಕಿರುಕುಳ ಪ್ರಕರಣ: ಸೂರಜ್‌ ರೇವಣ್ಣಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ನ್ಯಾಯಾಲಯ

Bar & Bench

ಸ್ವಪಕ್ಷದ ಕಾರ್ಯಕರ್ತನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಇದೇ ಬಗೆಯ ಮತ್ತೊಂದು ಪ್ರಕರಣದಲ್ಲಿಯೂ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದರಿಂದ ಸೂರಜ್‌ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಸೂರಜ್‌ ಸಲ್ಲಿಸಿದ್ದ ನಿಯತ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಇಂದು ಅರ್ಜಿಗಳನ್ನು ಪುರಸ್ಕರಿಸಿದ್ದಾರೆ.

ಸೂರಜ್‌ ಅವರು 2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಎಷ್ಟೇ ಮೊತ್ತದ ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ದೂರುದಾರ ಮತ್ತು ಸಂತ್ರಸ್ತರಿಗೆ ಬೆದರಿಕೆ ಹಾಕಬಾರದು. ತನಿಖೆಗೆ ಸಹಕರಿಸಬೇಕು, ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಸಂಬಂಧಿತ ನ್ಯಾಯಾಲಯದ ಅನುಮತಿ ಪಡೆಯದೇ ಸೂರಜ್‌ ದೇಶ ತೊರೆಯುವಂತಿಲ್ಲ. ತಿಂಗಳ ಎರಡನೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5ರ ಒಳಗೆ ತನಿಖಾಧಿಕಾರಿ ಮುಂದೆ ಆರು ತಿಂಗಳು ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಹಾಜರಾಗಬೇಕು. ಇಂಥದ್ದೇ ಅಪರಾಧದಲ್ಲಿ ಸೂರಜ್‌ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಇದೇ ಷರತ್ತುಗಳನ್ನು ನಿರೀಕ್ಷಣಾ ಜಾಮೀನಿಗೂ ಅನ್ವಯಿಸಲಾಗಿದೆ.

ಸೂರಜ್‌ ನಿಯತ ಜಾಮೀನು ಅರ್ಜಿಯಲ್ಲಿ ವಕೀಲ ಜಿ ಅರುಣ್‌, ನಿರೀಕ್ಷಣಾ ಜಾಮೀನು ಅರ್ಜಿಯ ಸಂಬಂಧ ನಿಖಿಲ್‌ ಡಿ. ಕಾಮತ್‌ ವಾದಿಸಿದ್ದರು. ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಮತ್ತು ಅಶೋಕ್‌ ನಾಯಕ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಹೊಳೆನರಸೀಪುರದಲ್ಲಿ ಘನ್ನಿಗಡ ಫಾರ್ಮ್‌ ಹೌಸ್‌ಗೆ ಜೂನ್‌ 16ರಂದು ಕರೆಯಿಸಿಕೊಂಡು ಸೂರಜ್‌ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಹಣದ ಆಮಿಷವನ್ನೂ ಒಡ್ಡಿದ್ದರೂ ಎಂದು ಸಂತ್ರಸ್ತ ಯುವಕ ಚೇತನ್‌ ಎಂಬಾತ ಸೂರಜ್‌ ಮತ್ತು ಅವರ ಬೆಂಬಲಿಗ ಎಂ ಎಲ್‌ ಶಿವಕುಮಾರ್‌ ವಿರುದ್ಧ ಜೂನ್‌ 22ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಸೂರಜ್‌ ಮತ್ತು ಶಿವಕುಮಾರ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 377,342,506 ಜೊತೆಗೆ 34ರ ಅಡಿ ಪ್ರಕರಣ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸೂರಜ್‌ ಬಂಧನವಾಗಿತ್ತು. ಈ ಪ್ರಕರಣದಲ್ಲಿ ನಿಯತ ಜಾಮೀನು ಕೋರಿದ್ದರು.

ಇನ್ನೊಂದು ಪ್ರಕರಣದಲ್ಲಿ ಸೂರಜ್‌ ಆಪ್ತ ಎನ್ನಲಾದ ಎಂ ಎಲ್‌ ಶಿವಕುಮಾರ್‌ ನೀಡಿದ ದೂರಿನ ಮೇರೆಗೆ ಸೂರಜ್‌ ರೇವಣ್ಣ, ಚನ್ನರಾಯಪಟ್ಟಣದ ರಕ್ಷಿತ್‌ ಮತ್ತು ಹಾಸನದ ಸಚಿನ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 342, 506, 377 ಜೊತೆಗೆ 34ರ ಅಡಿ ಜೂನ್‌ 25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

ಸೂರಜ್‌ ತನ್ನ ಮೇಲೂ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚೇತನ್‌ ವಿರುದ್ಧ ದೂರು ಕೊಡಿಸಲು ಸಚಿನ್‌, ರಕ್ಷಿತ್‌ ಮೂಲಕ ತನ್ನ ಮೇಲೆ ಒತ್ತಡ ಹೇರಿದ್ದರು. ಸೂರಜ್‌ ಪ್ರಭಾವಿ ಕುಟುಂಬದವರಾಗಿದ್ದು ಭಯದಿಂದ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎಂದು ಶಿವಕುಮಾರ್‌ ದೂರಿನಲ್ಲಿ ವಿವರಿಸಿದ್ದಾರೆ. ಈ ಪ್ರಕರಣದಲ್ಲಿ ಸೂರಜ್‌ ನಿರೀಕ್ಷಣಾ ಜಾಮೀನು ಕೋರಿದ್ದರು.