Suraj Revanna 
ಸುದ್ದಿಗಳು

ಯುವಕನಿಗೆ ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣ ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ

Bar & Bench

ಯುವಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್‌ ರೇವಣ್ಣರನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಸೂರಜ್‌ರನ್ನು ವಿಚಾರಣೆಗಾಗಿ 14 ದಿನ ಕಸ್ಟಡಿಗೆ ನೀಡಬೇಕು ಎಂದು ಸಿಐಡಿ ಪರ ಸರ್ಕಾರಿ ಅಭಿಯೋಜಕರು ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರಿಗೆ ರಿಮ್ಯಾಂಡ್‌ ಅರ್ಜಿ ಸಲ್ಲಿಸಿ ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸೂರಜ್‌ ಪರ ವಕೀಲರು ತಮ್ಮ ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಲಾಗಿದೆ. ಸೂರಜ್‌ರನ್ನು 2-3 ದಿನ ವಿಚಾರಣೆಗೆ ನೀಡಿದರೆ ಸಾಕು. ಘಟನೆ ನಡೆದ ತಕ್ಷಣ ದೂರು ನೀಡಿಲ್ಲ. ಸಂತ್ರಸ್ತ ಎನ್ನಲಾದ ವ್ಯಕ್ತಿಯು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ ಎಂದು ಆರೋಪಿಸಿದರು.

ಇದನ್ನು ವಿರೋಧಿಸಿದ ಸರ್ಕಾರಿ ಅಭಿಯೋಜಕರು ʼಪ್ರಕರಣದಲ್ಲಿ ದೂರುದಾರನಿಗೆ ಆರೋಪಿಯಿಂದ ಬೆದರಿಕೆ ಇದ್ದುದರಿಂದ ತಡವಾಗಿ ದೂರು ನೀಡಿದ್ದಾನೆ. ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ವಿಚಾರಣೆ ಅಗತ್ಯವಿದೆ. ಅಲ್ಲಿ ಸ್ಥಳ ಮಹಜರ್‌ ನಡೆಸಿ, ವೈದ್ಯಕೀಯ ಪರೀಕ್ಷೆ ನಡೆಸಬೇಕಿದೆ. ಸಾಕ್ಷ್ಯ ಸಂಗ್ರಹಣೆ ಮಾಡಬೇಕಿದ್ದು, ಫೋನ್‌ ವಶಕ್ಕೆ ಪಡೆಬೇಕಿದೆ. ಸೂರಜ್‌ ಅವರು ವಾಟ್ಸಾಪ್‌ ಚಾಟ್‌ ನಡೆಸಿದ್ದು, ಅದನ್ನು ಪರಿಶೀಲಿಸಬೇಕಿದೆ. ಬೆದರಿಕೆ ಆರೋಪವೂ ಇರುವುದರಿಂದ ಸಾಕ್ಷ್ಯ ಸಂಗ್ರಹ ಅತಿಮುಖ್ಯವಾಗಿದೆ. ಕೃತ್ಯ ನಡೆದ ದಿನ ಆರೋಪಿ ಧರಿಸಿದ್ದ ವಸ್ತ್ರ, ವಾಹನ ಜಪ್ತಿ ಮಾಡಬೇಕಿದೆ. ಎರಡನೇ ಆರೋಪಿಯನ್ನೂ ವಶಕ್ಕೆ ಪಡೆದು, ಮುಖಾಮುಖಿ ವಿಚಾರಣೆ ನಡೆಸಬೇಕಿದೆ. ಹೀಗಾಗಿ, 14 ದಿನ ಕಸ್ಟಡಿ ಅಗತ್ಯವಾಗಿದೆ” ಎಂದರು.

ಇದನ್ನು ಪ್ರತಿರೋಧಿಸಿದ ಸೂರಜ್‌ ಪರ ವಕೀಲರು “ಪ್ರಕರಣಕ್ಕೆ ಸಂಬಂಧಿಸಿದ ಎಲ್ಲವನ್ನೂ ಜಪ್ತಿ ಮಾಡಲಾಗಿದೆ. ಮಹಜರ್‌ ಮಾತ್ರ ಬಾಕಿ ಇದೆ. ಹೀಗಾಗಿ, ಸಿಐಡಿ ಕೋರಿಕೆ ಮನ್ನಿಸಬಾರದು” ಎಂದರು.

ಈ ನಡುವೆ, ಮ್ಯಾಜಿಸ್ಟ್ರೇಟ್‌ ಅವರು “ಪೆನ್‌ಡ್ರೈವ್‌ ಜಪ್ತಿ ಮಾಡಲಾಗಿದೆ” ಎಂದು ಹೇಳಲಾಗಿದೆಯಲ್ಲಾ? ಎಂದರು. ಅದನ್ನು ಸ್ಥಳೀಯ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಅಭಿಯೋಜಕರು ಪ್ರತಿಕ್ರಿಯಿಸಿದರು. ಆಗ ಪೀಠವು ಆರೋಪಿಯ ಸ್ವಇಚ್ಛಾ ಹೇಳಿಕೆ ಪಡೆಯಲಾಗಿದೆ. ಆರೋಪಿಯ ಮನೆಯ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲಾಗಿದೆ ಎಂದ ಮೇಲೆ 14 ದಿನ ಕಷ್ಟ ಅಗತ್ಯವೇನಿದೆ? ಜುಲೈ 1ರವರೆಗೆ ಕಸ್ಟಡಿಗೆ ನೀಡಲಾಗುವುದು” ಎಂದು ಹೇಳಿ, ಆದೇಶಿಸಿದರು.

ಭಾನುವಾರ ಬೆಳಿಗ್ಗೆ ಬಂಧಿತರಾಗಿದ್ದ ಸೂರಜ್‌ರನ್ನು ನಿನ್ನೆ ರಾತ್ರಿ ಬೆಂಗಳೂರಿನ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. ಭಾನುವಾರದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇಂದು ವಿಚಾರಣೆಗಾಗಿ ಸಿಐಡಿಯು ರಿಮ್ಯಾಂಡ್‌ ಅರ್ಜಿ ಸಲ್ಲಿಸಿದ್ದನ್ನು ಪರಿಶೀಲಿಸಿದ ನ್ಯಾಯಾಲಯ ಸೂರಜ್‌ರನ್ನು ಸಿಐಡಿ ವಶಕ್ಕೆ ನೀಡಿದೆ.

ಶನಿವಾರ ಸಂಜೆ ಹಾಸನದ ಸೈಬರ್ ಠಾಣೆಯಲ್ಲಿ ಸೂರಜ್ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದರು. ಸೂರಜ್‌ ಅವರ ವಿರುದ್ಧ ಯುವಕನೊಬ್ಬ ಸಲ್ಲಿಸಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 (ಅನೈಸರ್ಗಿಕ ಅಪರಾಧ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (ಬೆದರಿಕೆ), 34 (ಏಕೋದ್ದೇಶಕ್ಕಾಗಿ ವಿವಿಧ ವ್ಯಕ್ತಿಗಳು ಎಸಗಿದ ಕೃತ್ಯ) ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಗಡ ತೋಟದ ಮನೆಯಲ್ಲಿ ತನ್ನೊಂದಿಗೆ ಸೂರಜ್‌ ರೇವಣ್ಣ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಯುವಕ ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದರು. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಕ ಮನವಿ ಮಾಡಿದ್ದರು.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ ಶನಿವಾರ ದೂರುದಾರನಿಂದ ಹೇಳಿಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. ಭಾನುವಾರ ಸೂರಜ್‌ ಅವರ ಬಂಧನವಾದ ಕೆಲ ಗಂಟೆಗಳ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿತ್ತು.

ಇದಕ್ಕೂ ಮುನ್ನ, ಅಂದರೆ ಶುಕ್ರವಾರ ಸೂರಜ್‌ ಆಪ್ತ ಶಿವಕುಮಾರ್‌ ಅವರು ಕೂಡ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ವ್ಯಕ್ತಿ ಪರಿಚಿತನಾಗಿದ್ದ. ನಾನು ಸೂರಜ್‌ ಬ್ರಿಗೇಡ್‌ ಖಜಾಂಚಿಯಾಗಿದ್ದರಿಂದ ಸೂರಜ್‌ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದ. ಅದರಂತೆ ಜೂನ್‌ 16ರಂದು ಸೂರಜ್‌ ಅವರು ಗನ್ನಿಗಡ ತೋಟದ ಮನೆಯಲ್ಲಿ ಸಿಗುತ್ತಾರೆ ಎಂದಿದ್ದೆ. ಸೂರಜ್‌ ಅವರು ತನಗೆ ಈಗ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ನೀನು ಸಹಾಯ ಮಾಡದಿದ್ದರೆ ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ರೂಪಾಯಿ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದು ಹಣ ನೀಡದೆ ಹೋದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಹೇಳಿದ್ದ ಎಂದು ಆರೋಪಿಸಿದ್ದರು.