Suraj Revanna 
ಸುದ್ದಿಗಳು

ಯುವಕನಿಗೆ ಲೈಂಗಿಕ ಕಿರುಕುಳ ಪ್ರಕರಣ: ಸೂರಜ್‌ ಸಿಐಡಿ ಕಸ್ಟಡಿ ಜುಲೈ 3ರವರೆಗೆ ವಿಸ್ತರಿಸಿದ ವಿಶೇಷ ನ್ಯಾಯಾಲಯ

Bar & Bench

ಯುವಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್‌ ರೇವಣ್ಣರ ಸಿಐಡಿ ಕಸ್ಟಡಿಯನ್ನು ಜುಲೈ 3ರವರೆಗೆ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ವಿಸ್ತರಿಸಿದೆ.

ಸೂರಜ್‌ ಅವರ ಏಳು ದಿನಗಳ ಪೊಲೀಸ್‌ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಸಿಐಡಿ ಪೊಲೀಸರು ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರುಪಡಿಸಿದರು.

ಸಿಐಡಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯಕ್‌ ಅವರು “ಸೂರಜ್‌ ಅವರ ಕೂದಲು ಮತ್ತು ಧ್ವನಿ ಮಾದರಿ ಸಂಗ್ರಹಿಸಬೇಕಿರುವುದರಿಂದ ಅವರ ಕಸ್ಟಡಿ ಅವಧಿಯನ್ನು ಆರು ದಿನ ವಿಸ್ತರಿಸಬೇಕು” ಎಂದು ಕೋರಿದರು.

ಇದಕ್ಕೆ ಸೂರಜ್‌ ವಕೀಲರು ಆಕ್ಷೇಪಿಸಿದರು. ಅಂತಿಮವಾಗಿ ಪೀಠವು ಸೂರಜ್‌ ಸಿಐಡಿ ಕಸ್ಟಡಿಯನ್ನು ಎರಡು ದಿನ ಮಾತ್ರ ವಿಸ್ತರಿಸಿ, ಆದೇಶಿಸಿತು.

ಸೂರಜ್‌ ವಿರುದ್ಧ ಯುವಕನೊಬ್ಬ ಸಲ್ಲಿಸಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 377 (ಅನೈಸರ್ಗಿಕ ಅಪರಾಧ), 342 (ಅಕ್ರಮ ಬಂಧನಕ್ಕಾಗಿ ದಂಡನೆ), 506 (ಬೆದರಿಕೆ), 34 (ಏಕೋದ್ದೇಶಕ್ಕಾಗಿ ವಿವಿಧ ವ್ಯಕ್ತಿಗಳು ಎಸಗಿದ ಕೃತ್ಯ) ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಗಡ ತೋಟದ ಮನೆಯಲ್ಲಿ ತನ್ನೊಂದಿಗೆ ಸೂರಜ್‌ ರೇವಣ್ಣ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಯುವಕ ಪೊಲೀಸ್‌ ಮಹಾ ನಿರ್ದೇಶಕರು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದರು. ಹನುಮನಹಳ್ಳಿ ಗ್ರಾಮದ ಶಿವಕುಮಾರ್ ಮತ್ತು ಸೂರಜ್ ರೇವಣ್ಣ ಅವರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಕ ಮನವಿ ಮಾಡಿದ್ದರು.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ ಕಳೆದ ಶನಿವಾರ ದೂರುದಾರನಿಂದ ಹೇಳಿಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. ಕಳೆದ ಭಾನುವಾರ ಸೂರಜ್‌ ಅವರ ಬಂಧನವಾದ ಕೆಲ ಗಂಟೆಗಳ ಬಳಿಕ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿತ್ತು.

ಇದಕ್ಕೂ ಮುನ್ನ, ಅಂದರೆ ಕಳೆದ ಶುಕ್ರವಾರ ಸೂರಜ್‌ ಆಪ್ತ ಶಿವಕುಮಾರ್‌ ಅವರು ಕೂಡ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಯುವಕನ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐದು ಕೋಟಿ ರೂಪಾಯಿ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದು ಹಣ ನೀಡದೆ ಹೋದಲ್ಲಿ ಸೂರಜ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದಾಗಿ ಹೇಳಿದ್ದ ಎಂದು ಆರೋಪಿಸಿದ್ದರು.