“ಸಂತ್ರಸ್ತೆಯ ಸಮುದಾಯ ಮತ್ತು ಆಕೆಯ ಬಡತನ ನೋಡಿ ಲೈಂಗಿಕ ದೌರ್ಜನ್ಯ ಎಸಗುವುದು ಕ್ರೂರವಾದ ಕೃತ್ಯ” ಎಂದು ಈಚೆಗೆ ಕಟುವಾಗಿ ನುಡಿದಿರುವ ಕರ್ನಾಟಕ ಹೈಕೋರ್ಟ್, ಅಪ್ರಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ 68 ವರ್ಷದ ವ್ಯಕ್ತಿಗೆ ಜಾಮೀನು ನಿರಾಕರಿಸಿದೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಚನ್ನಪ್ಪರ್ ಅಲಿಯಾಸ್ ರಾಜಯ್ಯ ಅಲಿಯಾಸ್ ಅಂಗಡಿ ರಾಜ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
“ಅಪ್ರಾಪ್ತೆಯ ಬಡತನ, ಆಕೆಯ ಮುಗ್ಧತೆ ಮತ್ತು ನಿರ್ದಿಷ್ಟವಾಗಿ ಆಕೆಯ ಸಮುದಾಯದ ಹಿನ್ನೆಲೆ ಅರಿತುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಅತ್ಯಂತ ಕ್ರೂರ ಕೃತ್ಯವಾಗಿದೆ. ಸಂತ್ರಸ್ತೆಯ ಮೇಲೆ ಮೇಲ್ಮನವಿದಾರರು ಎಸಗಿರುವ ಹೀನ ಕೃತ್ಯವನ್ನು ಖಂಡಿಸಬೇಕಿದೆ. ವಿಶೇಷವಾಗಿ ಇಲ್ಲಿನ ಅರ್ಜಿದಾರನ ಕೃತ್ಯವನ್ನು ತೀವ್ರವಾಗಿ ಖಂಡಿಸಬೇಕಿದೆ. ವಯಸ್ಸಿನಲ್ಲಿ ಸಾಕಷ್ಟು ಹಿರಿಯನಾಗಿರುವ ಆರೋಪಿಯು ಇತರರು ಇಂಥ ಕೃತ್ಯ ಎಸಗದಂತೆ ಜಾಗೃತಿ ಮೂಡಿಸಬೇಕು. ಇಲ್ಲವೇ ಇಂಥ ಕೃತ್ಯ ನಡೆಯದಂತೆ ತಡೆಯುವ ಸಂಬಂಧ ಹಿರಿಯರಿಗೆ ತಿಳಿಸಬೇಕು. ಇದಕ್ಕೆ ಬದಲಾಗಿ ಆತ ಘಾತಕ ಕೃತ್ಯ ಎಸಗಿದ್ದಾನೆ” ಎಂದು ನ್ಯಾಯಾಲಯ ಆಘಾತ ವ್ಯಕ್ತಪಡಿಸಿದೆ.
“ಸಂತ್ರಸ್ತೆಯು ಮೊದಲಿಗೆ ತನ್ನ ಸೋದರ ಸಂಬಂಧಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ. ಆನಂತರ ತಿಂಡಿ ಮತ್ತು ಹೊಸ ಉಡುಪುಗಳನ್ನು ಕೊಡಿಸುವುದಾಗಿ ಪುಸಲಾಯಿಸಿ ಮೇಲ್ಮನವಿದಾರ ಮತ್ತು ಇತರರು ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ” ಎಂದೂ ಆದೇಶದಲ್ಲಿ ದಾಖಲಿಸಿರುವ ಪೀಠವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಸರ್ಕಾರದ ಪರ ವಕೀಲೆ ಪುಷ್ಪಲತಾ ಮತ್ತು ಸಂತ್ರಸ್ತೆ ಪರ ವಕೀಲೆ ಮೈತ್ರೇಯಿ ಕೃಷ್ಣನ್ ಅವರು “ಸಂತ್ರಸ್ತೆಯು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಘಟನೆ ನಡೆದ ದಿನದಂದು ಆಕೆ ಅಪ್ರಾಪ್ತೆಯಾಗಿದ್ದಳು. ಆಕೆಗೆ ಅಂಗಡಿಯಲ್ಲಿ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿ ಐವರು ಆರೋಪಿಗಳು ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ತನ್ನ ಮೊಮ್ಮಗಳ ವಯಸ್ಸಿನ ಬಾಲಕಿಯ ಮೇಲೆ 68 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿರುವುದು ಹೀನ ಕೃತ್ಯ” ಎಂದಿದ್ದರು.
ಅರ್ಜಿದಾರರ ಪರ ವಕೀಲ ಎಚ್ ಎಸ್ ಶಂಕರ್ ಅವರು “01.05.2024 ರಿಂದ 30.06.2024 ರ ನಡುವೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, 09.11.2024ರಂದು ಪ್ರಕರಣ ದಾಖಲಿಸಲಾಗಿದೆ. ಗರ್ಭದ ಜೊತೆ ಮೇಲ್ಮನವಿದಾರರ ವಂಶವಾಹಿ ಹೊಂದಿಕೆಯಾಗಿಲ್ಲ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಧರಿಸಿರುವುದು ಖಾತರಿಯಾಗಿದೆ. ಈ ಸಂಬಂಧ ಆಕೆಯ ಜೊತೆ ಸಮಾಲೋಚನೆ ನಡೆಸಿದಾಗ ಇದಕ್ಕೆ ಐವರು ಕಾರಣ ಎಂದು ಆಕೆ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376(3)(16 ವರ್ಷಗಳಿಗಿಂತ ಕೆಳಗಿನ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ), 376(2)(n)(ಸಾಮೂಹಿಕ ಅತ್ಯಾಚಾರ), 376(DA) (16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ) ಜೊತೆಗೆ 149(ಸಮಾನ ಉದ್ದೇಶ) ಪೋಕ್ಸೊ ಕಾಯಿದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಕೆ ಆರ್ ಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.