Ranjith 
ಸುದ್ದಿಗಳು

[ನಿರ್ದೇಶಕ ರಂಜಿತ್‌ ವಿರುದ್ಧದ ಆರೋಪ] ಘಟನೆ ನಡೆದಾಗ ಲೈಂಗಿಕ ಕಿರುಕುಳ ಜಾಮೀನು ನೀಡಬಲ್ಲ ಕೃತ್ಯ: ಕೇರಳ ಹೈಕೋರ್ಟ್‌

ಬಂಗಾಳಿ ನಟಿಯೊಬ್ಬರು ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Bar & Bench

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್‌ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿ ದಾಖಲಿಸಲಾಗಿದ್ದು, ಘಟನೆ ನಡೆದಾಗ ಆ ಕೃತ್ಯ ಜಾಮೀನು ನೀಡಬಹುದಾದ ಅಪರಾಧವಾಗಿತ್ತು ಎಂದಿರುವ ಕೇರಳ ಹೈಕೋರ್ಟ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕೋರಿಕೆಯನ್ನು ಬುಧವಾರ ಮುಕ್ತಾಯಗೊಳಿಸಿತು.

ಪ್ರಕರಣ 2009ನೇ ಇಸವಿಗೆ ಸಂಬಂಧಿಸಿದ್ದು ಐಪಿಸಿ ಸೆಕ್ಷನ್ 354ರಡಿ (ಮಹಿಳೆಯ ಘನತೆಗೆ ಧಕ್ಕೆ ತರುವ ಸಲುವಾಗಿ ಮಹಿಳೆ ಮೇಲೆ ದಾಳಿ ಇಲ್ಲವೇ ಕ್ರಿಮಿನಲ್‌ ಬಲಪ್ರಯೋಗ) ) 2013ರಿಂದಷ್ಟೇ ಕೃತ್ಯವನ್ನು ಜಾಮೀನು ರಹಿತ ಅಪರಾಧ ಎಂದು ಘೋಷಿಸಿರುವುದರಿಂದ ಪೊಲೀಸರು ರಂಜಿತ್‌ ವಿರುದ್ಧ ಪರಿಗಣಿಸಿರುವ ಪ್ರಕರಣ ಜಾಮೀನು ನೀಡಬಹುದಾದ ಅಪರಾಧವಾಗಿದೆ ಎಂದು ನ್ಯಾ. ಸಿ ಎಸ್‌ ಡಯಾಸ್‌ ತಿಳಿಸಿದರು.

ತೀರ್ಪಿನ ಪ್ರಕಾರ ಜಾಮೀನಿನ ಮೇಲೆ ರಂಜಿತ್ ಬಿಡುಗಡೆಗೆ ನ್ಯಾಯಾಲಯದ ಅನುಮತಿ ಅಗತ್ಯವಿರದೆ ಪೊಲೀಸರೇ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ.

ಈ ಅಂಶದ ಕುರಿತು ಪ್ರಾಸಿಕ್ಯೂಷನ್ ವಾದ ಮಂಡಿಸಿದ ಬಳಿಕ ನ್ಯಾಯಾಲಯ ರಂಜಿತ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಕ್ತಾಯಗೊಳಿಸಿತು.

ಬಂಗಾಳಿ ನಟಿಯೊಬ್ಬರು ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2009ರಲ್ಲಿ "ಪಲೇರಿಮಾಣಿಕ್ಯಂ" ಚಿತ್ರದ ಚರ್ಚೆಯ ಸಂದರ್ಭದಲ್ಲಿ ನಟಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪ ರಂಜಿತ್ ಮೇಲಿತ್ತು. ರಂಜಿತ್ ಅವರು ಎರ್ನಾಕುಲಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿದ್ದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಆ ಪರಿಸ್ಥಿತಿಯಿಂದ ಪಾರಾಗುವಲ್ಲಿ ಯಶಸ್ವಿಯಾದ ತಾನು ಆ ಅನುಭವವನ್ನು ನಂತರ ಚಿತ್ರಕಥೆಗಾರರೊಂದಿಗೆ ಹಂಚಿಕೊಂಡಿದ್ದೆ ಎಂದು ನಟಿ ಹೇಳಿದ್ದರು.

ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಸ್ಥಿತಿಗತಿ ಕುರಿತು ಆಗಸ್ಟ್ 19, 2024ರಂದು ನ್ಯಾ. ಕೆ ಹೇಮಾ ಸಮಿತಿ ವರದಿ ಪ್ರಕಟವಾದ ಬಳಿಕ ರಂಜಿತ್‌ ಸೇರಿದಂತೆ ಹಲವು ಚಿತ್ರಕರ್ಮಿಗಳ ವಿರುದ್ಧ ಆರೋಪ ಮಾಡಲಾಗಿತ್ತು.